ಮಂಗಳೂರು : ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಕಾಲೇಜು, ಮಂಗಳೂರು, “ಶೈನ್ ಫೌಂಡೇಶನ್” ಸಹಯೋಗದೊಂದಿಗೆ “ಸಿನರ್ಜಿಯಾ 2025” ಎಂಬ ರಾಷ್ಟ್ರೀಯ ಮಟ್ಟದ ಸೃಜನಾತ್ಮಕ ನವೋದ್ಯಮ ಮೇಳವು ನವೆಂಬರ್ 6ರಿಂದ 8ರವರೆಗೆ ನಡೆಯಲಿದ್ದು ,ಈ ಕಾರ್ಯಕ್ರಮವು ವಿಜ್ಞಾನ,ತಂತ್ರಜ್ಞಾನ ಹಾಗೂ ಸೃಜನಶೀಲತೆಯ ಸಂಯೋಜನೆಯ ಮೂಲಕ ಸಾಮಾಜಿಕ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ವೇದಿಕೆಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ತಿಳಿಸಿದರು.

ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ದೇಶದಾದ್ಯಂತ 425ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳಿಂದ10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು,ಕಾರ್ಯಕ್ರಮವು ನವೋದ್ಯಮ,ಸಂಶೋಧನೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ನವೆಂಬರ್ 6 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು ಇದರಲ್ಲಿ ಮುಖ್ಯ ಅತಿಥಿಯಾಗಿ ಇಜಿಡಿಕೆ ಯ ಚೀಫ್ ಟೆಕ್ನಾಲಜಿ ಆಫೀಸರ್ ರಾದ ಅಲ್ಲನ್ ಬೆಚ್ ಹಾಗೂ ಇಜಿಡಿಕೆ ಯ ಹೆಡ್ ಆಫ್ ಹುಮಾನ್ ರಿಸೋರ್ಸ್ ಟೀನಾ ಬೋದಿನ್ ಭಾಗವಹಿಸಲಿದ್ದಾರೆ . ನವೆಂಬರ್ 8 ರಂದು ಗ್ರಾಂಡ್ ಫಿನಾಲೆ ಮತ್ತು ಪ್ರಶಸ್ತಿ ವಿತರಣೆ, ಸನ್ಮಾನ ಕಾರ್ಯಕ್ರಮವು ನಡೆಯಲಿದೆ ಎಂದರು .
ಅವರು ಸಿನರ್ಜಿಯಾ 2025 ರ ಪ್ರಮುಖ ವಿಭಾಗಗಳಲ್ಲಿ ಒಂದಾದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ,ಶಾಲಾ ಹಾಗೂ ಪಿಯು ವಿದ್ಯಾರ್ಥಿಗಳಿಗೆ ನವೀನ ಆಲೋಚನೆಗಳನ್ನು ಪ್ರದರ್ಶಿಸಲು ವೇದಿಕೆ ಇದಾಗಿದೆ .ಆಯ್ಕೆಯಾದ ತಂಡಗಳಿಗೆ 2 ಲಕ್ಷ ಮೊತ್ತದ Seed Grant ಹಾಗೂ Proof of Concept ಅಭಿವೃದ್ಧಿಗೆ ಸಹಾಯ ದೊರೆಯಲಿದೆ ಎಂದರು.

ಡೆವ್ಹೋಸ್ಟ್ -ರಾಷ್ಟ್ರೀಯ ಹ್ಯಾಕಥಾನ್ ಬಗ್ಗೆ ವಿವರಿಸುತ್ತಾ , ಈ ಕಾರ್ಯಕ್ರಮದಲ್ಲಿ EG ಪ್ರಾಯೋಜಿತ 8ನೇ ಆವೃತ್ತಿಯ ಡೆವ್ಹೋಸ್ಟ್ ಎಂಬ ಪ್ರಮುಖ ತಾಂತ್ರಿಕ ಕಾರ್ಯಕ್ರಮವೂ ಒಳಗೊಂಡಿದೆ. ಇದು ಸಹ್ಯಾದ್ರಿ ಓಪನ್ ಸೋರ್ಸ್ ಕಮ್ಯೂನಿಟಿ (SOSC) ಆಯೋಜಿಸುವ 36 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಆಗಿದೆ. ಈ ವಿಭಾಗದಲ್ಲಿ ಉದ್ಯಮ ತಜ್ಞರಿಂದ ಡೆವಲಪರ್ ಟಾಕ್ಸ್, ಮಾಸ್ಟರ್ಕ್ಲಾಸ್ಗಳು ಮತ್ತು ವರ್ಕ್ ಶಾಪ್ಗಳು ನಡೆಯಲಿದ್ದು, ಜೊತೆಗೆ ರೋಚಕ ತಾಂತ್ರಿಕ ಸ್ಪರ್ಧೆಗಳೂ ಆಯೋಜಿಸಲಾಗಿದೆ ಎಂದರು
ಇದರ ಜೊತೆಗೆ ಏರೋಫಿಲಿಯಾ – ತಾಂತ್ರಿಕ ಮತ್ತು ಸಾಂಸ್ಕೃತಿಕ ಮೇಳ , ಸುಮೋ ಫೈಟ್ ಹಾಗೂ ಸ್ವಯಂ ಚಾಲಿತ ರೋಬೋ ಸ್ಪರ್ಧೆ ಇರಲಿದ್ದು ಇದು ವಿದ್ಯಾರ್ಥಿಗಳಿಗೆ , ಶಿಕ್ಷಕರಿಗೆ ,ಉದ್ಯಮ ಶೀಲರಿಗೆ ಹೊಸ ಅವಕಾಶವನ್ನೇ ಹೊತ್ತು ತರಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ ಸುಧೀರ್ ಶೆಟ್ಟಿ ,ಡಾ ಶಮಂತ್ ರೈ ,ಡಾ ಪ್ರಶಾಂತ್ ರಾವ್ ಮುಂತಾದವರು ಉಪಸ್ಥಿತರಿದ್ದರು .

