ಕೊಚ್ಚಿನ್ : ನಟ ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಅವರ ಮುಂಬರುವ ದೃಶ್ಯಂ 3 ಚಿತ್ರದ ಒಂದು ನಿಮಿಷ 50 ಸೆಕೆಂಡುಗಳ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟ್ಯಾಗ್ಲೈನ್ ‘ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ’. ಈ ಟೀಸರ್ ಅನ್ನು ಆಶೀರ್ವಾದ್ ಸಿನಿಮಾಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ. 2013 ರಲ್ಲಿ ಬಿಡುಗಡೆಯಾದ ಸೂಪರ್ಹಿಟ್ ಥ್ರಿಲ್ಲರ್ ಸಸ್ವೆನ್ಸ್ ದೃಶ್ಯಂ ಚಿತ್ರದ ಮೂರನೇ ಭಾಗ ಆಗಿರುವ ಈ ಚಿತ್ರವು ಮೋಹನ್ ಲಾಲ್ ಅವರ ಜನ್ಮದಿನವಾದ ಮೇ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟೀಸರ್ನಲ್ಲಿ ಮೊದಲ ಎರಡು ಭಾಗಗಳ ದೃಶ್ಯಗಳು ಮತ್ತು ಸಂಭಾಷಣೆಗಳೊಂದಿಗೆ ಪ್ರಾರಂಭವಾಗುತ್ತದೆ. ನಂತರ ಮೋಹನ್ ಲಾಲ್ ಅವರ ಜಾರ್ಜ್ ಕುಟ್ಟಿ ಪಾತ್ರವು ಚರ್ಚ್ನಲ್ಲಿ ಏಸು ಕ್ರಿಸ್ತರ ಮೂರ್ತಿಯ ಮುಂದೆ ಮಂಡಿಯೂರಿ ಪ್ರಾರ್ಥಿಸುತ್ತಿರುವುದನ್ನು ತೋರಿಸುತ್ತದೆ. ಜಾರ್ಜ್ ಕುಟ್ಟಿ ಅವರ ಸಂಭಾಷಣೆಯನ್ನು ಹಿನ್ನೆಲೆಯಲ್ಲಿ ಕೇಳಬಹುದು. ಅದರೊಂದಿಗೆ ಅನಿಲ್ ಜಾನ್ಸನ್ ಸಂಯೋಜಿಸಿದ ಹಿನ್ನೆಲೆ ಸಂಗೀತವು ಟೀಸರ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ.
ಈ ಚಿತ್ರವನ್ನು ಆಶಿರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಥೋನಿ ಪೆರುಂಬವೂರ್ ನಿರ್ಮಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಕಳೆದ ವರ್ಷ ಡಿಸೆಂಬರ್ ಆರಂಭದಲ್ಲಿ ಕೊನೆಗೊಂಡಿತು. ಮೋಹನ್ ಲಾಲ್ ಜೊತೆಗೆ ಮೀನಾ, ಎಸ್ತರ್ ಅನಿಲ್ ಮತ್ತು ಅನ್ಸಿಬಾ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸತೀಶ್ ಕುರುಪ್ ಛಾಯಾಗ್ರಾಹಕ. ಸಂಕಲನ: ವಿನಾಯಕ್, ಸಂಗೀತ: ಅನಿಲ್ ಜಾನ್ಸನ್.
ಮಲಯಾಳಂನ ಸಾರ್ವಕಾಲಿಕ ಅತ್ಯುತ್ತಮ ಥ್ರಿಲ್ಲರ್ ಚಿತ್ರಗಳಲ್ಲಿ ಒಂದಾದ ದೃಶ್ಯಂ 2013 ರಲ್ಲಿ ಬಿಡುಗಡೆಯಾಯಿತು. ನಂತರ 2021ರಲ್ಲಿ ದೃಶ್ಯಂ 2 ಬಿಡುಗಡೆಯಾಗಿತ್ತು.

