ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಸೇನಾ ಸಿಬ್ಬಂದಿ ಸೇರಿದಂತೆ 24 ಜನರು ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕ್ವೆಟ್ಟಾದಲ್ಲಿ ರೈಲ್ವೆ ಹಳಿಗಳ ಬಳಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಸೇನಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆದಿದೆ. ಸ್ಫೋಟಕಗಳನ್ನು ತುಂಬಿದ್ದ ಕಾರು ರೈಲಿಗೆ ಡಿಕ್ಕಿ ಹೊಡೆದಾಗ ಈ ಸ್ಫೋಟ ಸಂಭವಿಸಿದೆ. ಪ್ರತ್ಯೇಕತಾವಾದಿ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ. ಇದು ಆತ್ಮಾಹುತಿ ದಾಳಿ ಎಂದು ಬಿಎಲ್ಎ ಹೇಳಿಕೊಂಡಿದೆ.


ಸ್ಫೋಟವು ಹತ್ತಿರದ ನಿಲ್ದಾಣದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿತ್ತು. ಪ್ರಬಲವಾದ ಸ್ಫೋಟದಿಂದಾಗಿ ರೈಲಿನ ಎರಡು ಬೋಗಿಗಳು ಉರುಳಿ ಬೆಂಕಿ ಹೊತ್ತಿಕೊಂಡವು. ಸ್ಫೋಟದ ಸ್ಥಳದ ಬಳಿ ನಿಲ್ಲಿಸಲಾಗಿದ್ದ ಕೆಲವು ವಾಹನಗಳು ಸಹ ಹಾನಿಗೊಳಗಾಗಿವೆ ಎಂದು AFP ವರದಿ ಮಾಡಿದೆ. ಸ್ಫೋಟದ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂದು ವರದಿ ತಿಳಿಸಿದೆ.


ಬಲೂಚ್ ಲಿಬರೇಶನ್ ಆರ್ಮಿ ವಕ್ತಾರ ಜಿಯಾಂಡ್ ಬಲೂಚ್ ಹೇಳಿಕೆ ನೀಡಿ, ಸಂಘಟನೆಯ “ಮಜೀದ್ ಬ್ರಿಗೇಡ್” ಆತ್ಮಹತ್ಯಾ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನಿ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ. ಪೊಲೀಸರ ಪ್ರಕಾರ, ದಾಳಿಯನ್ನು ಪೂರ್ವಯೋಜಿತವಾಗಿ ನಡೆಸಲಾಗಿದ್ದು, ರೈಲು ಹಾದು ಹೋಗುತ್ತಿದ್ದಂತೆ ಗರಿಷ್ಠ ಹಾನಿಯನ್ನುಂಟುಮಾಡಲು ಸ್ಫೋಟಿಸಲಾಗಿದೆ. ಆತ್ಮಹತ್ಯಾ ಬಾಂಬರ್ ಮತ್ತು ಬಳಸಿದ ಸ್ಫೋಟಕಗಳ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
