ರಾಂಚಿ : ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಅತ್ಯಂತ ವೇಗದ ಓಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಗುರ್ವಿಂದರ್ ಸಿಂಗ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 2026ರ ಅಥ್ಲೆಟಿಕ್ಸ್ ಫೆಡರೇಶನ್ ಕಪ್ನ ಪುರುಷರ 100 ಮೀಟರ್ ಓಟದಲ್ಲಿ ಗುರ್ವಿಂದರ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಕೇವಲ 10.09 ಸೆಕೆಂಡುಗಳಲ್ಲಿ 100 ಮೀ ಓಟವನ್ನು ಪೂರ್ಣಗೊಳಿಸುವ ಮೂಲಕ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ

ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಫೆಡರೇಶನ್ ಕಪ್ನಲ್ಲಿ ಪಂಜಾಬ್ ಓಟಗಾರ ಗುರ್ವಿಂದರ್ ಸಿಂಗ್ ಹೊಸ ದಾಖಲೆಯೊಂದಿಗೆ ಸಂಚಲನ ಸೃಷ್ಟಿಸಿದರು.

ಈ ಗೆಲುವಿನೊಂದಿಗೆ ಅವರು ಏಷ್ಯಾದ ಎರಡನೇ ಅತೀ ವೇಗದ ಓಟಗಾರ ಎಂಬ ಹೆಗ್ಗಳಿಕೆ ಜೊತೆಗೆ ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ .ಗುರ್ವಿಂದರ್ ಈ ಹಿಂದೆ ಅನಿಮೇಶ್ ಕುಜುರ್ ಅವರ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದು ದೇಶದ ಅತ್ಯಂತ ವೇಗದ ಕ್ರೀಡಾಪಟು ಎನಿಸಿಕೊಂಡರು.
ಭಾರತದ ಅಥ್ಲೆಟಿಕ್ಸ್ ವಲಯದಲ್ಲಿ ಓಟದ ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಾಣವಾಗಿರುವುದು ಅಥ್ಲೆಟಿಕ್ಸ್ ವಲಯಕ್ಕೆ ಹೊಸ ಹುರುಪು ನೀಡುತ್ತಿದೆ. ಕ್ರಿಕೆಟ್ ಪ್ರಾಬಲ್ಯ ಮುಂದುವರಿಸಿರುವ ಭಾರತೀಯ ಕ್ರೀಡಾ ವಲಯದಲ್ಲಿ ಗುರ್ವಿಂದರ್ ಸಿಂಗ್ ಅವರ ದಾಖಲೆ, ವಿಶೇಷವಾಗಿ ಅಥ್ಲೆಟಿಕ್ಸ್ನಲ್ಲಿ, ಸ್ಫೂರ್ತಿದಾಯಕವಾಗಲಿದೆ ಎಂದು ಕ್ರೀಡಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

