
ಮಂಗಳೂರು: ಮಾತಾ ಅಮೃತಾನಂದಮಯಿ ದೇವಿ ಅವರು ಸಪ್ತ ವರ್ಷಗಳ ಬಳಿಕ ಮಂಗಳೂರಿಗೆ ಆಗಮಿಸುತ್ತಿದ್ದು, ಮೇ 28 ಮತ್ತು 29ರಂದು ನಡೆಯಲಿರುವ ‘ಅಮೃತಸಂಗಮ 2026’ ಹಾಗೂ ಬ್ರಹ್ಮಸ್ಥಾನಂ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ತಿಳಿಸಿದ್ದಾರೆ.

ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕೇರಳದ ಹೊರಗೆ ಕರ್ನಾಟಕದಲ್ಲಿ ಆಯ್ಕೆಯಾದ ಏಕೈಕ ಸ್ಥಳ ಮಂಗಳೂರು ಎಂಬುದು ವಿಶೇಷವಾಗಿದೆ. ಮಂಗಳೂರಿನ ಭಕ್ತರ ಮೇಲಿರುವ ಅಮ್ಮನವರ ಅಪಾರ ಮಮತೆಯ ಪ್ರತಿಫಲವೇ ಈ ಆಯ್ಕೆ ಎಂದು ಭಕ್ತರು ಅಭಿಪ್ರಾಯಪಡುತ್ತಿದ್ದಾರೆ ಎಂದರು.
25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಹಲವು ಸಮಾಜಮುಖಿ ಹಾಗೂ ಮಾನವೀಯ ಸೇವಾ ಯೋಜನೆಗಳಿಗೆ ಚಾಲನೆ ನೀಡುವ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಂಗಳೂರಿನ ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿ ತನಕ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮೇ 28ರಂದು ಅಮ್ಮನವರ ದಿವ್ಯ ಸಾನ್ನಿಧ್ಯದಲ್ಲಿ ವಿವಿಧ ಸೇವಾ ಯೋಜನೆಗಳ ಅನಾವರಣ ನಡೆಯಲಿದ್ದು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಶ್ರೀಪಾದ್ ಯೆಸ್ಸೋ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.

ಅಮ್ಮನವರ ದರ್ಶನಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಭಕ್ತರ ಅನುಕೂಲಕ್ಕಾಗಿ ಟೋಕನ್ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 9.30ರೊಳಗೆ ಆಗಮಿಸುವವರಿಗೆ ಟೈಮ್ ಕಾರ್ಡ್ ವಿತರಿಸಲಾಗುತ್ತದೆ. ಅದರ ಆಧಾರದ ಮೇಲೆ ದರ್ಶನ ಟೋಕನ್ ನೀಡಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಡಾ. ಜೀವರಾಜ್ ಸೊರಕೆ, ಸಿ.ಎ. ವಾಮನ್ ಕಾಮತ್, ಡಾ. ವಸಂತಕುಮಾರ ಪೆರ್ಲ, ಅಮೃತಸಂಗಮ ಆಯೋಜನಾ ಸಮಿತಿಯ ಕಾರ್ಯದರ್ಶಿ ಸಿ.ಎ. ರಾಮನಾಥ್ ಹಾಗೂ ಡಾ. ದೇವದಾಸ್ ಪುತ್ರನ್ ಉಪಸ್ಥಿತರಿದ್ದರು.


