ಪಂಡರಾಪುರ : ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾ ಸ್ಥಳ ಪಂಢರಪುರ ಇಂದು ದೇಶಕ್ಕೆ ಕೋಮು ಸೌಹಾರ್ದತೆಯ ಮಾದರಿಯನ್ನು ನೀಡಿದೆ. ಹಿಂದೂಗಳ ಅತ್ಯಂತ ಪವಿತ್ರ ದಿನವಾದ ಅಧಿಕ ಮಾಸದ ಏಕಾದಶಿ ಮತ್ತು ಮುಸ್ಲಿಮರ ಬಕ್ರೀದ್ ಹಬ್ಬ ಒಂದೇ ದಿನ ಬಂದಿರುವುದರಿಂದ, ಪಂಢರಪುರದ ಮುಸ್ಲಿಂ ಸಮುದಾಯವು ತಮ್ಮ ಹಬ್ಬದ ಭಾಗವಾದ ಪ್ರಾಣಿಬಲಿಯನ್ನು ಸ್ವಯಂಪ್ರೇರಿತವಾಗಿ ಎರಡು ದಿನಗಳ ಕಾಲ ಮುಂದೂಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದೆ.
ಪಂಢರಪುರದಲ್ಲಿ ಏಕಾದಶಿಯಂದು ಲಕ್ಷಾಂತರ ವಿಠ್ಠಲ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳನ್ನು ಗೌರವಿಸಿ ಮುಸ್ಲಿಂ ಸಮುದಾಯವು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಸ್ಲಿಂ ಸಮುದಾಯದ ಸದಸ್ಯ ಒಬ್ಬರು ಮಾತನಾಡುತ್ತಾ, “ನಾವು ಪಂಢರಪುರದಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿನ ದೇವಾಲಯದ ಉತ್ಸವಗಳೊಂದಿಗೆ ದಶಕಗಳಿಂದ ಒಡನಾಟ ಹೊಂದಿದ್ದೇವೆ. ವಿಠ್ಠಲ ಭಕ್ತರ ಭಾವನೆಗಳನ್ನು ಗೌರವಿಸುವ ಸಲುವಾಗಿ ಈ ಬಾರಿ ಪ್ರಾಣಿಬಲಿ ನೀಡದಿರಲು ನಿರ್ಧರಿಸಿದ್ದೇವೆ”

ಅಲ್ಲದೆ ಅಧಿಕ ಮಾಸದ ಏಕಾದಶಿ ಮೂರು ವರ್ಷಕ್ಕೊಮ್ಮೆ ಬರುತ್ತದೆ. ಈ ವಿಶೇಷ ಸಂದರ್ಭದಲ್ಲಿ ವಿಠ್ಠಲನ ಆಶೀರ್ವಾದ ಪಡೆಯಲು ಲಕ್ಷಾಂತರ ಭಕ್ತರು ಬರುತ್ತಾರೆ. ನಾವು ಆ ದಿನ ಪ್ರಾಣಿಬಲಿ ನೀಡದಿರಲು ನಿರ್ಧರಿಸಿದ್ದೇವೆ. ಇದು ಮೊದಲ ಬಾರಿಯಲ್ಲ, ಹಿಂದೆಯೂ ಇಂತಹ ಸಂದರ್ಭಗಳಲ್ಲಿ ನಾವು ಸೌಹಾರ್ದತೆ ಮೆರೆದಿದ್ದೇವೆ” ಎಂದು ತಿಳಿಸಿದ್ದಾರೆ.
ಕೋಮು ಸೌಹಾರ್ದತೆಗೆ ಮಾದರಿ ಪಂಢರಪುರದ ಈ ನಡೆ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. “ಧರ್ಮದ ಹೆಸರಲ್ಲಿ ಗೋಡೆಗಳನ್ನು ಕಟ್ಟುವ ಬದಲು ಪ್ರೀತಿಯ ಸೇತುವೆ ಕಟ್ಟುವುದು ಇಲ್ಲಿನ ಮುಸ್ಲಿಂ ಸಮುದಾಯದ ಮಹತ್ವದ್ದು” ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

