ವಿಜಯಪುರ : ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಆಸ್ತಿ ವಿವಾದ ಹಿನ್ನೆಲೆ 6 ಜನರ ಭೀಕರ ಹತ್ಯೆ ಮಾಡಲಾಗಿದೆ. ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ಹೋದ ಪರಿಣಾಮ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಅಮಾನುಷ ಕೃತ್ಯ ನಡೆದಿದೆ. ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ ಶಬ್ಬೀರ್ ನದಾಫ್ ಸೇರಿದಂತೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಜಮಿನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ ನಿರಾಳೆ ಕುಟುಂಬದ ಮಧ್ಯೆ ಜಗಳವಿತ್ತು. ಕಳೆದ ಕೆಲ ದಿನಗಳ ಹಿಂದೆ ಎರಡೂ ಕುಟುಂಬಗಳ ಮಧ್ಯೆ ಈ ಸಂಬಂಧ ನ್ಯಾಯ ಪಂಚಾಯತಿ ಕೂಡ ಆಗಿತ್ತು. ಇಂದು ಅದೇ ಜಮೀನಿನ ವಿಚಾರದಲ್ಲಿ ನ್ಯಾಯ ಪಂಚಾಯತಿಗೆಂದು ನಿರಾಳೆ ಕುಟುಂಬ ಮತ್ತು ಇತರರು ತೆರಳಿದ್ದರು. ಈ ವೇಳೆ ನಿರಾಳೆ ಕುಟುಂಬದವರ ಮೇಲೆ ದಾಳಿ ನಡೆಸಲಾಗಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

