ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭ ಕುರಿತು ಕಾಂಗ್ರೆಸ್ ಪಕ್ಷವು ಪ್ರಮುಖ ಘೋಷಣೆ ಮಾಡಿದೆ. ಲೋಕಭವನದ ಗ್ಲಾಸ್ ಹೌಸ್ನಲ್ಲಿ ಜೂನ್ 3 ನಡೆಯಲಿರುವ ಈ ಸರಳ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೆ.ಸಿ. ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆ.ಸಿ. ಚಂದ್ರಶೇಖರ್ ಅವರು, “ಜೂನ್ 3 ರಂದು ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ. ಅದೇ ದಿನ ಲೋಕಭವನದ ಗ್ಲಾಸ್ ಹೌಸ್ನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಆದರೆ ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶ ಇರುವುದಿಲ್ಲ. ಸಾರ್ವಜನಿಕರು ದಯವಿಟ್ಟು ಕಾರ್ಯಕ್ರಮಕ್ಕೆ ಬಾರದಂತೆ ಮನವಿ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಆರಂಭದಲ್ಲಿ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಕರೆತರಬೇಕು, ಅದಕ್ಕಾಗಿ ಬಸ್ ಬುಕಿಂಗ್ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಈಗ “ಆಡಂಬರ ಬೇಡ” ಎಂಬ ನಿರ್ಧಾರಕ್ಕೆ ಪಕ್ಷ ಬಂದಿದೆ.
“ನಾವು ಈಗ ಸರಳವಾಗಿ ಕಾರ್ಯಕ್ರಮ ನಡೆಸುತ್ತೇವೆ. ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಆಡಂಬರ ಬೇಡ, ಒಂದೊಳ್ಳೆ ಸರ್ಕಾರ ಕೊಡೋಣ ಎಂಬುದು ಪಕ್ಷದ ತೀರ್ಮಾನ. ಅದಕ್ಕಾಗಿಯೇ ಸಾರ್ವಜನಿಕರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬಾರದಂತೆ ಮನವಿ ಮಾಡುತ್ತಿದ್ದೇವೆ” ಎಂದು ಜೆ.ಸಿ. ಚಂದ್ರಶೇಖರ್ ವಿವರಿಸಿದರು.


