ಸೋನಾರ್ ಪುರ : ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ ಪುರದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆದಿದೆ. ಚುನಾವಣೋತ್ತರ ಹಿಂಸಾಚಾರದಲ್ಲಿ ಬಲಿಯಾದವರ ಕುಟುಂಬಗಳನ್ನು ಸಮಾಧಾನಪಡಿಸಲು ಅವರು ತೆರಳಿದ್ದ ವೇಳೆ ಅಪರಿಚಿತರು ಅವರ ಮೇಲೆ ಕಲ್ಲು, ಮೊಟ್ಟೆ ಮತ್ತು ಬೂಟುಗಳನ್ನು ಎಸೆದು ಹಲ್ಲೆ ನಡೆಸಿದ್ದಾರೆ.
ಟಿಎಂಸಿ ನಾಯಕಿ ಸಾಗರಿಕಾ ಘೋಷ್ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ದಾಳಿ ನಡೆದ ಸಂದರ್ಭದಲ್ಲಿ ಪೊಲೀಸರು ಸೂಕ್ತ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಅವರಂತಹ ಪ್ರಮುಖ ನಾಯಕನ ಭೇಟಿಯ ವೇಳೆ ಪೊಲೀಸ್ ವ್ಯವಸ್ಥೆ ಕಾಣಿಸದಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಭಿನ್ನಾಭಿಪ್ರಾಯಗಳ ಹೆಸರಿನಲ್ಲಿ ಹಿಂಸಾಚಾರ ನಡೆಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಸಮರ್ಪಕ ಭದ್ರತೆ ನೀಡದಿರುವುದು ಗಂಭೀರ ವಿಚಾರ ಎಂದು ಖರ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಘಟನೆಯ ನಂತರ ಪ್ರತಿಕ್ರಿಯಿಸಿದ ಅಭಿಷೇಕ್ ಬ್ಯಾನರ್ಜಿ, ತಮ್ಮ ಮೇಲೆ ನಡೆದ ದಾಳಿ ಸಾಮಾನ್ಯ ಪ್ರತಿಭಟನೆ ಅಲ್ಲ, ಬದಲಾಗಿ ಪೂರ್ವಯೋಜಿತ ಕೊಲೆ ಯತ್ನವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಕುರಿತು ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಘೋಷಿಸಿದ್ದಾರೆ.
ಟಿಎಂಸಿ ಆಡಳಿತದ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಹಲವು ಬಾರಿ ಹಲ್ಲೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿರುವ ಭಟ್ಟಾಚಾರ್ಯ, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಟಿಎಂಸಿ ನಾಯಕರು ಮತ್ತು ಸಂಸದರು ಸುರಕ್ಷಿತರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

