ಅಟ್ಲಾಂಟಾ: ಜಾರ್ಜಿಯಾದ ಡಾಸನ್ ಕೌಂಟಿಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮಲಯಾಳಿ ವಿವಾಹಿತ ಮತ್ತು ಹೆಲಿಕಾಪ್ಟರ್ ಪೈಲಟ್ ಸಾವನ್ನಪ್ಪಿದ್ದಾರೆ. ನವವಿವಾಹಿತನನ್ನು ಡೇವ್ ಫಿಜಿ ಎಂದು ಗುರುತಿಸಲಾಗಿದೆ. ಡೇವ್ ಮತ್ತು ಜೆಸ್ಸಿ ಮೇ 29 ರಂದು ವಿವಾಹವಾದರು. ವಧು-ವರರು ಪ್ರಯಾಣಿಸುತ್ತಿದ್ದ ರಾಬಿನ್ಸನ್ R66 ಹೆಲಿಕಾಪ್ಟರ್ ವಿವಾಹ ಸಮಾರಂಭದ ನಂತರ ಅಪಘಾತಕ್ಕೀಡಾಗಿದೆ.

ಡೆಲ್ಟಾ ಏರ್ಲೈನ್ಸ್ನ ಪೈಲಟ್ ಆಗಿದ್ದ ಭಾರತೀಯ ಮೂಲದ ಡೇವ್ ಫಿಜಿ (25) ಮತ್ತು ಹೆಲಿಕಾಪ್ಟರ್ನ ಪೈಲಟ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ, ಆದರೆ ವಧು ಜೆಸ್ನಿ ತೀವ್ರ ಗಾಯಗಳೊಂದಿಗೆ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಮಳೆ ಮತ್ತು ಮಂಜಿನ ಕಾರಣದಿಂದ ಹೆಲಿಕಾಪ್ಟರ್ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದ್ದು, ರಕ್ಷಣಾ ಸಿಬ್ಬಂದಿ ಜೆಸ್ನಿಯನ್ನು ರಕ್ಷಿಸಿದ್ದಾರೆ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಕೆಟ್ಟ ಹವಾಮಾನ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಡಾಸನ್ ಕೌಂಟಿ ಶೆರಿಫ್ ಕಚೇರಿ, ಅಗ್ನಿಶಾಮಕ ಮತ್ತು ಇಎಂಎಸ್ ಘಟಕಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಘಟನೆಯ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.
ಕೇರಳ ಮೂಲದ ಈ ದಂಪತಿ ವಿವಾಹವು ಶುಕ್ರವಾರ ಡಾಸನ್ವಿಲ್ಲೆಯ ‘ದಿ ರೆವೆರೆ’ ಕಲ್ಯಾಣ ಮಂಟಪದಲ್ಲಿ ನೂರಾರು ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ವಿವಾಹದ ಬಳಿಕ ದಂಪತಿ ಹೋಟೆಲ್ಗೆ ತೆರಳಲು ಹೆಲಿಕಾಪ್ಟರ್ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟರ್ ಡಾಸನ್ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.

