ಬೆಂಗಳೂರು : ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ಘಟ್ಟಕ್ಕೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗುತ್ತಿದ್ದು, ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲು ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನ ಲೋಕಭವನದ ಗಾಜಿನ ಮನೆ (ಗ್ಲಾಸ್ ಹೌಸ್) ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದು, ಇಂದು (ಜೂನ್ 3) ಸಂಜೆ ಸರಿಯಾಗಿ 4 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಆಡಂಬರವಿಲ್ಲದೆ, ಅತ್ಯಂತ ಶಿಸ್ತುಬದ್ಧವಾಗಿ ಈ ಐತಿಹಾಸಿಕ ಸಮಾರಂಭ ನೆರವೇರಲಿದ್ದು, ಬೆಂಗಳೂರಿನಾದ್ಯಂತ ನಿಯೋಜಿತ ಸಿಎಂ ಅವರ ಬೃಹತ್ ಕಟೌಟ್ ಹಾಗೂ ಬ್ಯಾನರ್ಗಳು ರಾರಾಜಿಸುತ್ತಿವೆ.
ಈ ಬಾರಿಯ ಪದಗ್ರಹಣ ಕಾರ್ಯಕ್ರಮಕ್ಕೆ ವಿಶೇಷವಾಗಿ ವಾಸ್ತು ಸ್ಪರ್ಶ ನೀಡಲಾಗಿದೆ. ಈ ಹಿಂದೆ ಲೋಕಭವನದಲ್ಲಿ ನಡೆಯುತ್ತಿದ್ದ ಕಲಾಪಗಳ ವೇದಿಕೆ ಪಶ್ಚಿಮಾಭಿಮುಖವಾಗಿ ಇರುತ್ತಿತ್ತು. ಆದರೆ, ಈ ಬಾರಿ ಜ್ಯೋತಿಷಿ ಆರಾಧ್ಯ ಅವರ ಸಲಹೆಯ ಮೇರೆಗೆ ವೇದಿಕೆಯನ್ನು ಪೂರ್ವಾಭಿಮುಖವಾಗಿ ಅತ್ಯಂತ ಆಕರ್ಷಕವಾಗಿ ಸಿದ್ಧಪಡಿಸಲಾಗಿದೆ. ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ಹೊತ್ತುಕೊಂಡಿದ್ದು, ಪ್ರತಿಯೊಂದು ಸಿದ್ಧತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಮತ್ತೊಂದೆಡೆ, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರಲು ಸರ್ವಧರ್ಮ ಸಮನ್ವಯತೆಗೆ ಆದ್ಯತೆ ನೀಡಲಾಗಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಶ್ರೀಗಳು, ತರಳುಬಾಳು ಶ್ರೀಗಳು, ಪೇಜಾವರ ಶ್ರೀಗಳು, ರಂಭಾಪುರಿ ಶ್ರೀಗಳು ಹಾಗೂ ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಸೇರಿದಂತೆ ವಿವಿಧ ಮಠಾಧೀಶರು, ಚರ್ಚ್ನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೋ ಮತ್ತು ಮೌಲ್ವಿಗಳು ಸೇರಿದಂತೆ ಒಟ್ಟು 55 ಸರ್ವಧರ್ಮದ ಪ್ರಮುಖ ಗುರುಗಳಿಗೆ ಗೌರವಪೂರ್ವಕ ಆಹ್ವಾನ ನೀಡಲಾಗಿದೆ.
ಬೃಹತ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಸಿನಿಮಾ ತಾರೆಯರು ಸೇರಿದಂತೆ ವಿವಿಧ ರಂಗದ ಗಣ್ಯರಿಗಾಗಿ ಲೋಕಭವನದಲ್ಲಿ 1,100 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 3 ಹಂತದ ಪ್ರತ್ಯೇಕ ಪಾಸ್ಗಳನ್ನು ವಿತರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಸಂತನಗರದ ಶಾಂಗ್ರೀಲಾ ಹೋಟೆಲ್ ಹಾಗೂ ಕೆಪಿಸಿಸಿ ಕಚೇರಿಯ 1 ಕಿ.ಮೀ ವ್ಯಾಪ್ತಿಯಲ್ಲಿ ‘ನೋ-ಫ್ಲೈ ಝೋನ್’ ಘೋಷಿಸಲಾಗಿದೆ. ಭದ್ರತೆ ಹಾಗೂ ಟ್ರಾಫಿಕ್ ದಟ್ಟಣೆ ನಿಯಂತ್ರಿಸುವ ಸಲುವಾಗಿ ವಿಧಾನಸೌಧ, ವಿಕಾಸಸೌಧ ಮತ್ತು ಎಂ.ಎಸ್. ಬಿಲ್ಡಿಂಗ್ ಸಿಬ್ಬಂದಿಗೆ ಇಂದು ಅರ್ಧ ದಿನ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.

