ಮಂಗಳೂರು : ನಗರದ ಸಾಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ (SCEM)ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ECE) ವಿಭಾಗದಲ್ಲಿ ಸೆಮಿಕಂಡಕ್ಟರ್ ಕೇಂದ್ರಿತ ಶಿಕ್ಷಣಕ್ಕೆ ಮಹತ್ವದ ಉತ್ತೇಜನ ದೊರೆತಿದೆ.
ಮೇ 30ರಂದು ನಡೆದ ವಿಭಾಗದ 7ನೇ ಅಧ್ಯಯನ ಮಂಡಳಿ (Board of Studies) ಸಭೆಯಲ್ಲಿ ಈ ಕುರಿತು ಮಹತ್ವದ ಬೆಳವಣಿಗೆಗಳು ಚರ್ಚೆಗೆ ಬಂದವು. ಸಭೆಯನ್ನು ಉದ್ದೇಶಿಸಿ ಆನ್ಲೈನ್ ಮೂಲಕ ಮಾತನಾಡಿದ ಆರ್ವಿ ಸ್ಕಿಲ್ಸ್ ಡಿಸೈನ್ ಸೆಂಟರ್ (VLSI Design Centre of Excellence)ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಗರಾಜು ಅವರು, ಇತ್ತೀಚೆಗೆ ಅನುಮೋದನೆ ಪಡೆದಿರುವ ಎಂಟೆಕ್ (VLSI Design ಹಾಗೂ Embedded Systems) ಕೋರ್ಸ್ಗಳಿಗೆ ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬಿ.ಇ. (ECE) ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಹಯೋಗದ ಪರಿಕಲ್ಪನೆಗೆ ಸಾಹ್ಯಾದ್ರಿ ಕಾಲೇಜಿನ ಗೌರವಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಚಾಲನೆ ನೀಡಿದ್ದು, ಆರ್ವಿ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಪಿ. ಶ್ಯಾಮ್ ಅವರೊಂದಿಗೆ ಪ್ರಾಥಮಿಕ ಚರ್ಚೆಗಳನ್ನು ಆರಂಭಿಸಿದ್ದರು. ಬಳಿಕ ಇಸಿಇ ವಿಭಾಗದ ಮುಖ್ಯಸ್ಥ ಡಾ. ಅನುಷ್ ಬೇಕಲ್ ಅವರು ಆರ್ವಿ ಸ್ಕಿಲ್ಸ್ ಡಿಸೈನ್ ಸೆಂಟರ್ನೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಶೈಕ್ಷಣಿಕ ಸಹಭಾಗಿತ್ವಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ಸಭೆಯಲ್ಲಿ ಮಾತನಾಡಿದ ಬಸವರಾಜ ನಾಗರಾಜು ಅವರು, ಭಾರತದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು, ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಯುತ ಮಾನವ ಸಂಪನ್ಮೂಲದ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದರು. ಪಠ್ಯಕ್ರಮ ಅಭಿವೃದ್ಧಿ, ಅಧ್ಯಾಪಕರ ಕೌಶಲ್ಯ ವೃದ್ಧಿ, ಪ್ರಯೋಗಾಲಯ ಅಭಿವೃದ್ಧಿ, ಕೈಗಾರಿಕಾ ಮಾರ್ಗದರ್ಶನ, ಇಂಟರ್ನ್ಶಿಪ್, ಪ್ರಮಾಣಪತ್ರ ಕಾರ್ಯಕ್ರಮಗಳು ಹಾಗೂ ಯೋಜನಾ ಮಾರ್ಗದರ್ಶನದ ಮೂಲಕ ಸಹಕಾರ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.
ಆರ್ವಿ ಸ್ಕಿಲ್ಸ್ ಡಿಸೈನ್ ಸೆಂಟರ್ನೊಂದಿಗಿನ ಈ ಸಹಭಾಗಿತ್ವವು ವಿಭಾಗದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದ್ದು, ಈಗಾಗಲೇ ಕೆಎಆರ್ಎಂಐಸಿ ಡಿಸೈನ್ ಪ್ರೈವೇಟ್ ಲಿಮಿಟೆಡ್ ಹಾಗೂ ಅನ್ಮಯ ಟೆಕ್ನಾಲಜೀಸ್ ಸಂಸ್ಥೆಗಳೊಂದಿಗೆ ಹೊಂದಿರುವ ಸಹಯೋಗಕ್ಕೆ ಪೂರಕವಾಗಿದೆ. ಈ ಸಂಸ್ಥೆಗಳು VLSI ವಿನ್ಯಾಸ, ಎಂಬೆಡೆಡ್ ಸಿಸ್ಟಮ್ಸ್, FPGA ಪರಿಹಾರಗಳು ಹಾಗೂ ಸೆಮಿಕಂಡಕ್ಟರ್ ನವೋದ್ಯಮ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿವೆ.
ಅಧ್ಯಯನ ಮಂಡಳಿಯ ಸದಸ್ಯರು ವಿಭಾಗದ ಸಾಧನೆಯನ್ನು ಶ್ಲಾಘಿಸಿದ್ದು, ಕೈಗಾರಿಕಾ ಸಹಭಾಗಿತ್ವ ವಿಸ್ತರಣೆ, ಬಿ.ಇ. (ECE) ಕಾರ್ಯಕ್ರಮದ ಗುಣಮಟ್ಟ ಹೆಚ್ಚಳ ಹಾಗೂ ಹೊಸದಾಗಿ ಆರಂಭವಾಗಲಿರುವ ಎಂಟೆಕ್ ಕಾರ್ಯಕ್ರಮಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸ ಎಂಟೆಕ್ ಕಾರ್ಯಕ್ರಮಗಳ ಆರಂಭ ಮತ್ತು ಪ್ರಮುಖ ಕೈಗಾರಿಕಾ ಸಹಭಾಗಿತ್ವಗಳ ಮೂಲಕ ಸಾಹ್ಯಾದ್ರಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗವು ಸೆಮಿಕಂಡಕ್ಟರ್ ಶಿಕ್ಷಣ, ಸಂಶೋಧನೆ, ನಾವೀನ್ಯತೆ, ಕೈಗಾರಿಕಾ ಸಂಪರ್ಕ ಹಾಗೂ ಪ್ರತಿಭಾ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ.


