ಹೊಸದಿಲ್ಲಿ : ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿರುವ ಫರಿಶ್ ಸ್ಟೇ ಬಿ & ಬಿ ಅತಿಥಿಗೃಹದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಲವಕೇಶ್ ಬಜಾಜ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಗ್ನಿ ಸುರಕ್ಷತೆ ಮತ್ತು ಕಟ್ಟಡ ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ.
ಹೌಝ್ ರಾಣಿ ಪ್ರದೇಶದಲ್ಲಿರುವ ಐದು ಮಹಡಿಯ ಅತಿಥಿಗೃಹದಲ್ಲಿ ಬುಧವಾರ ನಸುಕಿನ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ 21 ಮಂದಿ ಸಾವನ್ನಪ್ಪಿದ್ದರು. ಮೃತರಲ್ಲಿ 18 ಮಂದಿ ಆಫ್ರಿಕನ್ ರಾಷ್ಟ್ರಗಳು, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ಪ್ರಜೆಗಳಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಲವಕೇಶ್ ಬಜಾಜ್ ಹಾಗೂ ಅವರ ಪತ್ನಿಯ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟಿಸ್ ಜಾರಿಗೊಳಿಸಿದ್ದರು. ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿ ಬಜಾಜ್ ಅವರನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಅತಿಥಿಗೃಹವು ಕಡ್ಡಾಯವಾಗಿ ಪಡೆಯಬೇಕಿದ್ದ ಅಗ್ನಿ ಸುರಕ್ಷತಾ ನಿರಾಕ್ಷೇಪಣಾ ಪತ್ರ (ಎನ್ಒಸಿ) ಹೊಂದಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ಹಲವು ಕಟ್ಟಡ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ದೆಹಲಿ ಸರ್ಕಾರದ ಗೃಹ ಸಚಿವ ಆಶೀಶ್ ಸೂದ್ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಟ್ಟಡದಲ್ಲಿ ಕೇವಲ ಒಂದು ನಿರ್ಗಮನ ಮಾರ್ಗ ಮಾತ್ರವಿದ್ದು, ಬಹುತೇಕ ಕಿಟಕಿಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿದ್ದವು. ಅಲ್ಲದೆ, ಮುಖ್ಯ ದ್ವಾರವು ಸೆನ್ಸಾರ್ ಆಧಾರಿತ ವ್ಯವಸ್ಥೆಯನ್ನು ಹೊಂದಿದ್ದು, ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಒಳಗಿದ್ದವರ ರಕ್ಷಣಾ ಕಾರ್ಯಾಚರಣೆಗೆ ಇದು ತೀವ್ರ ಅಡಚಣೆಯಾಗಿದೆ.
ದೆಹಲಿ ಸರ್ಕಾರದ ಬೆಡ್ ಅಂಡ್ ಬ್ರೇಕ್ಫಾಸ್ಟ್ (B&B) ನಿಯಮಾವಳಿಗಳ ಪ್ರಕಾರ, ಈ ಕಟ್ಟಡದಲ್ಲಿ ಗರಿಷ್ಠ ಆರು ಕೊಠಡಿಗಳನ್ನು ಮಾತ್ರ ನಿರ್ವಹಿಸಲು ಅನುಮತಿ ಇತ್ತು. ಆದರೆ ನಿಯಮಗಳನ್ನು ಉಲ್ಲಂಘಿಸಿ ಬೇಸ್ಮೆಂಟ್ ಸೇರಿದಂತೆ ಒಟ್ಟು 25 ಕೊಠಡಿಗಳನ್ನು ಕಾರ್ಯನಿರ್ವಹಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿ ದುರಂತಕ್ಕೆ ಕಾರಣವಾದ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


