ಮಂಗಳೂರು : ಮಂಗಳೂರು ನಗರದ ಹೃದಯಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಹೆಸರಿನಲ್ಲಿ ಅಕ್ರಮ ಹಣ ವಸೂಲಿ ನಡೆಯುತ್ತಿದ್ದು, ರಾತ್ರಿ ವೇಳೆ ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಆಗ್ರಹಿಸಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ನಗರದ ಸ್ಟೇಟ್ ಬ್ಯಾಂಕ್ ಪ್ರದೇಶದಿಂದ ರಾವ್ ಆಂಡ್ ರಾವ್ ಸರ್ಕಲ್ ಹಾಗೂ ಲೇಡಿಗೋಷನ್ ಆಸ್ಪತ್ರೆ ತನಕ ಶನಿವಾರ ಮತ್ತು ಭಾನುವಾರ ಫುಟ್ಪಾತ್ಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಪ್ರಸನ್ನ ರವಿ ಆರೋಪಿಸಿದರು.
“ನಾನು ಬೀದಿ ವ್ಯಾಪಾರಸ್ಥರ ವಿರೋಧಿಯಲ್ಲ. ಅವರಿಗೆ ಸರ್ಕಾರ ನಿಗದಿತ ವ್ಯಾಪಾರ ವಲಯ (ವೆಂಡಿಂಗ್ ಝೋನ್) ಕಲ್ಪಿಸಬೇಕು. ಆದರೆ ಫುಟ್ಪಾತ್ಗಳ ಅತಿಕ್ರಮಣದಿಂದಾಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳು, ಗರ್ಭಿಣಿಯರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ” ಎಂದು ಅವರು ಹೇಳಿದರು.
ಬೀದಿ ವ್ಯಾಪಾರಿಗಳ ಯೋಗಕ್ಷೇಮದ ಹೆಸರಿನಲ್ಲಿ ಸಿಐಟಿಯು ನಾಯಕರು ಇಮ್ತಿಯಾಜ್ ಹಾಗೂ ಸುನಿಲ್ ಬಜಾಲ್ ಅವರು ತಲಾ ₹20ರಂತೆ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಪ್ರಸನ್ನ ರವಿ ಆರೋಪಿಸಿದರು.
“ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಲು ಮುಂದಾದಾಗ ಬಡ ವ್ಯಾಪಾರಿಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತದೆ. ಆದರೆ ಪ್ರಕರಣಗಳು ಮಾತ್ರ ಬಡ ವ್ಯಾಪಾರಿಗಳ ವಿರುದ್ಧ ದಾಖಲಾಗುತ್ತವೆ. ನೈಜ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಸೂಕ್ತ ಜಾಗ ಕಲ್ಪಿಸಬೇಕು” ಎಂದು ಅವರು ಒತ್ತಾಯಿಸಿದರು.


