ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ದೇಬೋಸ್ಮಿತಾ ಪಾಲ್ (49) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ ಪಶ್ಚಿಮ ಬಂಗಾಳದ ದಂಪತಿಗಳನ್ನು ಬಂಧಿಸಿದ್ದಾರೆ. ಬರ್ಧಮಾನ್ನಲ್ಲಿರುವ ತನ್ನ ಆಸ್ತಿಯನ್ನು ಮಾರಾಟ ಮಾಡಲು ನಿರಾಕರಿಸಿದ ನಂತರ ಹಂತಕರು ದೆಹಲಿಗೆ ಪ್ರಯಾಣಿಸಿ ದೇಬೋಸ್ಮಿತಾ ಅವರನ್ನು ಕೊಂದಿದ್ದಾರೆ ಎಂದು ಪೋಲಿಸರು ಹೇಳಿದ್ದಾರೆ.
ಶಿವಾಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ದೇಬೋಸ್ಮಿತಾ ಪಾಲ್, ಜೂನ್ 4 ರಂದು ಪೂರ್ವ ದೆಹಲಿಯ ವಸುಂಧರಾ ಎನ್ಕ್ಲೇವ್ನಲ್ಲಿರುವ ಸತ್ಯಂ ಅಪಾರ್ಟ್ಮೆಂಟ್ನಲ್ಲಿರುವ ತಮ್ಮ ಫ್ಲಾಟ್ನಲ್ಲಿ ಕೊಲೆಯಾಗಿ ಪತ್ತೆಯಾಗಿದ್ದರು. ಸಿಸಿಟಿವಿ ವಿಶ್ಲೇಷಣೆ ಮತ್ತು ತಾಂತ್ರಿಕ ಕಣ್ಗಾವಲು ಒಳಗೊಂಡ ತೀವ್ರ ತನಿಖೆಯ ನಂತರ ಆರೋಪಿಗಳಾದ ರಾಮಪ್ರಸಾದ್ ದಾಸ್ (42), ಅವರ ಪತ್ನಿ ಬನಶ್ರೀ ದಾಸ್ (36) ಮತ್ತು ಅವರ ಅಪ್ರಾಪ್ತ ಪುತ್ರನನ್ನು ಪಶ್ಚಿಮ ಬಂಗಾಳದ ಬುರ್ದ್ವಾನ್ನಲ್ಲಿ ಪತ್ತೆಹಚ್ಚಿ ಬಂಧಿಸಲಾಯಿತು.

ಹಂತಕರ ಭೇಟೆ : ದರೋಡೆಯ ಯಾವುದೇ ಕುರುಹು ಇಲ್ಲದ ಈ ನಿಗೂಢ ಪ್ರಕರಣವನ್ನು ಭೇದಿಸಲು ದೆಹಲಿ ಪೊಲೀಸರಿಗೆ ಬಹು ದೊಡ್ಡ ಸವಾಲಾಗಿದ್ದಿತ್ತು ,ಆದರೆ ಪೋಲಿಸರು ಅತ್ಯಾಧುನಿಕ ಹಾಗೂ ತಾಂತ್ರಿಕ ತನಿಖಾ ವಿಧಾನಗಳನ್ನು ಈ ಪ್ರಕರಣ ಭೇದಿಸಲು ಬಳಸಿದರು. ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಮಗುವಿನೊಂದಿಗೆ ಬಂದಿದ್ದ ಶಂಕಿತ ದಂಪತಿ ಕಣ್ಣಿಗೆ ಬಿದ್ದಿದ್ದಾರೆ. ಕೊಲೆಗಾರರು ಬಟ್ಟೆ ಬದಲಾಯಿಸಿ ಹೊರಹೋಗಲು ಬಳಸಿದ ಖಾಸಗಿ ಕ್ಯಾಬ್ ಅನ್ನು ಪೊಲೀಸರು ತಕ್ಷಣವೇ ಪತ್ತೆಹಚ್ಚಿ, ಅದರ ಚಾಲಕನನ್ನು ವಶಕ್ಕೆ ಪಡೆದರು. ಆತನ ರೈಡ್ ಬುಕಿಂಗ್ ವಿವರಗಳು ಮತ್ತು ಜಿಪಿಎಸ್ ದತ್ತಾಂಶಗಳ ಮೂಲಕ ಪ್ರಯಾಣಿಕರ ಮೂಲ ಗುರುತನ್ನು ಪತ್ತೆಹಚ್ಚಲಾಯಿತು. ಪೊಲೀಸರು ಅಂದು ವಸತಿ ಸಂಕೀರ್ಣಕ್ಕೆ ಭೇಟಿ ನೀಡಿದ್ದ 200 ವ್ಯಕ್ತಿಗಳಲ್ಲಿ 13 ಮುಖ್ಯ ಶಂಕಿತರನ್ನು ಶಾರ್ಟ್ಲಿಸ್ಟ್ ಮಾಡಿದರು. ತಕ್ಷಣವೇ ರಚನೆಯಾದ 7 ವಿಶೇಷ ಪೊಲೀಸ್ ತಂಡಗಳು ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ಮಿಂಚಿನ ದಾಳಿ ನಡೆಸಿ, ನೂರಾರು ಜನರನ್ನು ಪ್ರಶ್ನಿಸಿ, ಅಂತಿಮವಾಗಿ ಬಂಗಾಳದ ಬರ್ಧಮಾನ್ನಲ್ಲಿ ಆರೋಪಿಗಳನ್ನು ಲಾಕ್ ಮಾಡಿದರು.
ಪ್ರಾಧ್ಯಾಪಕಿ ದೇಬೋಸ್ಮಿತಾ ಪಾಲ್ ಅವರು ಪಶ್ಚಿಮ ಬಂಗಾಳದಲ್ಲಿ ತಮ್ಮ ಅಜ್ಜನಿಂದ ಪಿತ್ರಾರ್ಜಿತವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆದಿದ್ದರು. ಬಂಧಿತ ಆರೋಪಿಗಳು 2023ರಿಂದ ಆ ಮನೆಯಲ್ಲಿ ಬಾಡಿಗೆದಾರರಾಗಿದ್ದು, ಅದನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸಿದ್ದರು. ಪಾಲ್ ಅವರು ಮನೆಯನ್ನು ಖಾಲಿ ಮಾಡುವಂತೆ ಕಾನೂನಾತ್ಮಕವಾಗಿ ಒತ್ತಡ ಹೇರುತ್ತಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿತ್ತು.
ಪಾಲ್ ಅವರ ಸಹೋದರಿ ದೇವರತಿ ಅವರು ನೀಡಿದ ದೂರಿನ ಮೇರೆಗೆ ಅತ್ಯಂತ ಸಕ್ರಿಯವಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಆಸ್ತಿ ಹಪಹಪಿಯ ಇಡೀ ಜಾಲವನ್ನು ಜಗತ್ತಿನ ಮುಂದೆ ತಂದಿದ್ದಾರೆ.
ಅಪರಾಧ ಎಸಗಿ 1,400 ಕಿಲೋಮೀಟರ್ ದೂರ ಓಡಿಹೋದರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ದೆಹಲಿ ಪೊಲೀಸರು ಸಾಬೀತುಪಡಿಸಿದ್ದಾರೆ. ತಂತ್ರಜ್ಞಾನ, ತ್ವರಿತ ನಿರ್ಧಾರ ಮತ್ತು ಇಲಾಖೆಗಳ ನಡುವಿನ ಸೌಹಾರ್ದಯುತ ಸಮನ್ವಯತೆಯಿಂದಾಗಿ ಈ ಭೀಕರ ಪ್ರಕರಣವು ಅತ್ಯಂತ ವೇಗವಾಗಿ ತಾರ್ಕಿಕ ಅಂತ್ಯಕ್ಕೆ ತಲುಪಿದ್ದು, ಮೃತ ಪ್ರಾಧ್ಯಾಪಕಿಯ ಕುಟುಂಬಕ್ಕೆ ಶೀಘ್ರ ನ್ಯಾಯ ಸಿಗುವ ಹಾದಿ ಸುಗಮವಾಗಿದೆ. ಪಾಲ್ 2022ರಲ್ಲಿ ಗಂಡನಿಂದ ಬೇರೆಯಾಗಿದ್ದರು, ಆಗ ಮದುವೆಯಾಗಿ ಐದು ವರ್ಷಗಳಾಗಿತ್ತು. ಅವರ ಪತಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

