ಮಂಗಳೂರು: ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ, ಸೂರಿಂಜೆ 159ನೇ ಬೂತ್ನ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಮನವಿ ಪತ್ರ ಸಲ್ಲಿಸಿ ಎಚ್ಚರಿಸಿದ್ದಾರೆ.
ಸೂರಿಂಜೆ ಹೋಬಳಿಯ ವ್ಯಾಪ್ತಿಗೆ ಬರುವ ಸೂರಿಂಜೆ- ಪುಚ್ಚಾಡಿ ರಸ್ತೆಯು ಕಳೆದ ಹದಿನೈದು ವರ್ಷಗಳಿಂದ ಯಾವುದೇ ಡಾಮರೀಕರಣ ಕಾಣದೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆಯ ತುಂಬಾ ಹೊಂಡ-ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ದಿನನಿತ್ಯ ಪ್ರಾಣಭಯದಲ್ಲೇ ಸಂಚರಿಸುವಂತಾಗಿದೆ. ಈ ರಸ್ತೆಯ ದುರಸ್ತಿಗಾಗಿ ಕಳೆದ ಐದು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಲಿಖಿತ ಅರ್ಜಿಗಳನ್ನು ಸಲ್ಲಿಸಿದ್ದರೂ, ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಾರ್ಯಕರ್ತರು ದೂರಿದ್ದಾರೆ.
ನಾವು ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಈ ರಸ್ತೆಯ ದುರವಸ್ಥೆಯ ಬಗ್ಗೆ ಪಕ್ಷದ ಹಿರಿಯ ಮುಖಂಡರ ಗಮನಕ್ಕೆ ಹಲವು ಬಾರಿ ತಂದಿದ್ದೆವು. ಆದರೆ ಪ್ರತಿ ಬಾರಿಯೂ ನಮಗೆ ಬರೀ ಭರವಸೆಗಳೇ ಸಿಕ್ಕಿವೆಯೇ ಹೊರತು ಯಾವುದೇ ಕಾಮಗಾರಿ ನಡೆದಿಲ್ಲ. ಇದರಿಂದಾಗಿ ಈ ಭಾಗದ ಬಿಜೆಪಿ ಬೆಂಬಲಿತ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಕ್ಷೇತ್ರದ ಜನರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಲು ನಮ್ಮದೇ ಪಕ್ಷದ ಜನಪ್ರತಿನಿಧಿಗಳು ಮತ್ತು ಮುಖಂಡರು ವಿಫಲರಾಗಿದ್ದಾರೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಗ್ರಾಮಸ್ಥರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ, ಇನ್ನು ಮುಂದಕ್ಕೆ ಪಕ್ಷದಲ್ಲಿ ಮುಂದುವರಿಯಲು ನಮಗೆ ಮುಜುಗರವಾಗುತ್ತಿದೆ. ಈ ಕಾರಣಕ್ಕಾಗಿ 159ನೇ ಪುಚ್ಚಾಡಿ ಸೂರಿಂಜೆ ಬೂತ್ ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸ್ವಇಚ್ಛೆಯಿಂದ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದು, ರಸ್ತೆ ಸರಿಪಡಿಸದಿದ್ದರೆ ಮುಂಬರುವ ಯಾವುದೇ ಚುನಾವಣೆಗಳಲ್ಲೂ ಮತದಾನ ಮಾಡದೆ ಬಹಿಷ್ಕರಿಸಲು ಅನಿವಾರ್ಯವಾಗಿ ನಿರ್ಧರಿಸಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಈ ಪತ್ರಕ್ಕೆ ಸೂರಿಂಜೆ 159ನೇ ಬೂತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಮಾಧವ ಸೂರಿಂಜೆ ಹಾಗೂ ಬೂತ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಹಿ ಹಾಕಿದ್ದು, ಸಂಬಂಧಪಟ್ಟ ಇಲಾಖೆಗಳು ಹಾಗೂ ಹಿರಿಯ ಮುಖಂಡರು ತಕ್ಷಣವೇ ಮಧ್ಯಪ್ರವೇಶಿಸಿ ರಸ್ತೆ ಡಾಮರೀಕರಣ ಅಥವಾ ಕಾಂಕ್ರೀಟೀಕರಣ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.


