ಮಂಗಳೂರು : ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ತುಳು ಚಲನಚಿತ್ರ “ಕಜ್ಜ” ಜೂನ್ 11ರಂದು ಕರಾವಳಿ ಜಿಲ್ಲೆಗಳಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ ರಚನೆಕಾರ ಮೋಹನ್ ರಾಜ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಷ್ಣು ಎಸ್. ಮೆನನ್ ಹಾಗೂ ಸಿದ್ದಾರ್ಥ್ ಶೆಟ್ಟಿ ಅವರ ನಿರ್ದೇಶನದಲ್ಲಿ, ವಿಶಾಂತ್ ಮಿನೆಜಿಸ್ ನಿರ್ಮಾಣ ಹಾಗೂ ಪ್ರವೀಣ್ ಸುವರ್ಣ ಅವರ ಸಹ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ ಎಂದು ತಿಳಿಸಿದರು.
ಚಿತ್ರವು ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರ, ಬೆಳ್ತಂಗಡಿ, ಸುಳ್ಯ, ಮುಡಿಪು ಸೇರಿದಂತೆ ಕರಾವಳಿಯ ವಿವಿಧ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಪ್ರೀಮಿಯರ್ ಶೋ ಮೂಲಕ ಪ್ರೇಕ್ಷಕರ ಮನಸ್ಸನ್ನು ಸೆಳೆದಿದೆ ಎಂದರು.

“ಕಜ್ಜ” ಅಂದರೆ ತುಳುವಿನಲ್ಲಿ ಕಾರ್ಯ ಎಂದರ್ಥ. ಒಂದೊಳ್ಳೆಯ ಕಾರ್ಯವನ್ನು ಮಾಡಲು ನಾವೆಲ್ಲ ಒಂದಾಗಿದ್ದೇವೆ. ಹಿಂದಿನ ಸಿನಿಮಾ ತುಡರ್ ಸಿನಿಮಾಕ್ಕೆ ಕೊಟ್ಟಷ್ಟೇ ಪ್ರೋತ್ಸಾಹ ಪ್ರೀತಿಯನ್ನು ಈ ಬಾರಿಯೂ ಕಜ್ಜ ಸಿನಿಮಾಕ್ಕೂ ನೀಡಿ ಎಂದು ನಟ ಸಿದ್ದಾಥ್೯ ತಿಳಿಸಿದರು.

“ಕಜ್ಜ” ಚಿತ್ರದಲ್ಲಿ ಸಿದ್ದಾರ್ಥ್ ಶೆಟ್ಟಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಸಂತೋಷ್ ಶೆಟ್ಟಿ, ಜಯಶೀಲಾ, ಉದಯ ಪೂಜಾರಿ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಪ್ರಜ್ವಲ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ನಟ ಸಿದ್ದಾರ್ಥ್ ಶೆಟ್ಟಿ, ನಿರ್ಮಾಪಕ ವಿಶಾಂತ್ ಮಿನೆಜಿಸ್, ಕಲಾವಿದರಾದ ಉದಯ ಪೂಜಾರಿ, ಗೌತಮ್ ಬಂಗೇರ, ಸಹನಾ ಸುಧಾಕರ್ ಹಾಗೂ ವಿಶ್ವಾಸ್ ಉಪಸ್ಥಿತರಿದ್ದರು.

