ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತ್ಯಂತ ಅಚ್ಚರಿಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಅತ್ತೆಯನ್ನೇ ವಿವಾಹವಾಗಿದ್ದಾನೆ. ಸದ್ಯ ಈ ವಿಲಕ್ಷಣ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಳಿಯ ಮತ್ತು ಅತ್ತೆ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಇವರಿಬ್ಬರು ನ್ಯಾಯಾಲಯದಲ್ಲಿ ನೋಂದಾಯಿತ ವಿವಾಹ (ನ್ಯಾಯಾಲಯದಲ್ಲಿ ಮದುವೆ) ಮಾಡಿಕೊಂಡಿದ್ದಾರೆ.
ಕಾನ್ಪುರದ ನಿವಾಸಿಯೊಬ್ಬರಿಗೆ ಕೆಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದ ಆರಂಭದಲ್ಲಿ ದಂಪತಿಯ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕಾಲಕ್ರಮೇಣ ಪತ್ನಿಯ ತಾಯಿ ಈ ದಂಪತಿಗಳ ಮನೆಗೆ ಆಗಾಗ ಬಂದು ಉಳಿದುಕೊಳ್ಳಲು ಆರಂಭಿಸಿದ್ದರು. ಈ ಸಮಯದಲ್ಲಿ ಅಳಿಯ ಮತ್ತು ಅತ್ತೆಯ ನಡುವೆ ಪ್ರೇಮಾಂಕುರವಾಗಿದೆ ಎನ್ನಲಾಗಿದೆ.
ಅತ್ತೆಯೊಂದಿಗಿನ ಸಂಬಂಧ ದಿನದಿಂದ ದಿನಕ್ಕೆ ಆಳವಾಗುತ್ತಿದ್ದಂತೆ, ಆ ವ್ಯಕ್ತಿ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದ. ಕೌಟುಂಬಿಕ ಕಲಹ ಹಾಗೂ ಭಿನ್ನಾಭಿಪ್ರಾಯಗಳ ನೆಪವೊಡ್ಡಿ ಆತ ನ್ಯಾಯಾಲಯದ ಮೂಲಕ ತನ್ನ ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ್ದ. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಆ ವ್ಯಕ್ತಿ ತನ್ನ ಮಾಜಿ ಪತ್ನಿಯ ತಾಯಿಯನ್ನು ಅಂದರೆ ತನ್ನ ಅತ್ತೆಯನ್ನು ಮದುವೆಯಾಗಲು ನಿರ್ಧರಿಸಿದ್ದ. ಇಬ್ಬರೂ ಒಮ್ಮತದಿಂದ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ವಿಚಿತ್ರವಾದ ಮದುವೆಗೆ ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

