ಮಂಗಳೂರು : ಮಳೆಗಾಲದ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ವಿಪತ್ತುಗಳನ್ನು ಎದುರಿಸಲು ಅಧಿಕಾರಿಗಳು ಅತ್ಯಂತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ತುರ್ತು ಸಂದರ್ಭ ಎದುರಾದಾಗ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಮೀರಿಯೂ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆದೇಶಿಸಿದರು.
ಸಭೆಯಲ್ಲಿ ರಸ್ತೆಗಳ ದುರಸ್ತಿ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಮಳೆಗಾಲದಲ್ಲಿ ರಸ್ತೆ ಹೊಂಡಗಳಿಂದಾಗಿ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಉಂಟಾದರೆ, ಅದಕ್ಕೆ ಸಂಬಂಧಿಸಿದ ಇಲಾಖೆಯ ಇಂಜಿನಿಯರ್ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು. ಕೇವಲ ತಾತ್ಕಾಲಿಕವಾಗಿ ಪದೇ ಪದೇ ಗುಂಡಿ ಮುಚ್ಚುವ ನಾಟಕವಾಡುವುದನ್ನು ಬಿಟ್ಟು, ರಸ್ತೆಗಳ ಶಾಶ್ವತ ಕಾಮಗಾರಿಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.
ಮಳೆಗಾಲದಲ್ಲಿ ಸುರಿಯುವ ಭಾರೀ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಮುರಿದು ಬಿದ್ದು ಉಂಟಾಗುವ ಅನಾಹುತಗಳನ್ನು ಮತ್ತು ಮಾನವ ನಿರ್ಮಿತ ಸಮಸ್ಯೆಗಳನ್ನು ತಗ್ಗಿಸಲು ಇಲಾಖೆ ಗಮನಹರಿಸಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡರೆ ತ್ವರಿತವಾಗಿ ಮರುಸ್ಥಾಪಿಸಲು ಹೆಚ್ಚುವರಿ ಲೈನ್ಮ್ಯಾನ್ಗಳು ಹಾಗೂ ತುರ್ತು ವಾಹನಗಳನ್ನು ಬಳಸಿಕೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ನೆರೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡರೆ ಅಥವಾ ಮರಗಳು ಬಿದ್ದರೆ ಆಯಾ ಸ್ಥಳೀಯ ಸಂಸ್ಥೆಗಳು ಯಾವುದೇ ವಿಳಂಬ ಮಾಡದೇ ತಕ್ಷಣವೇ ತೆರವುಗೊಳಿಸಬೇಕು ಎಂದರು.


