ಧಾರವಾಡ : ಆರಂಭದಿಂದಲೂ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ತಾಲೂಕಿನ ಬಿಜೆಪಿ ಹಿರಿಯ ಮುಖಂಡ, ಅಮ್ಮಿನಬಾವಿ ಮಂಡಳ ಪಂಚಾಯತಿಯ ಮಾಜಿ ಪ್ರಧಾನ ಮಲ್ಲೇಶಪ್ಪ ಚೆನ್ನಬಸಪ್ಪ ಹುಲ್ಲೂರ (ಎಂ.ಸಿ. ಹುಲ್ಲೂರ) (75) ಬುಧವಾರ ನಿಧನ ಹೊಂದಿದರು.
ತಾಲೂಕಾ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ, ಅಮ್ಮಿನಬಾವಿ ಸಮೂಹ ಗ್ರಾಮಗಳ ಶಿಕ್ಷಣ ವಿಶ್ವಸ್ಥ ಮಂಡಳಿಯ ಕಾರ್ಯಾಧ್ಯಕ್ಷರಾಗಿ, ಶ್ರೀಗುರುಶಾಂತಲಿಂಗ ಶಿವಾಚಾರ್ಯ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕರಾಗಿ, ಅಮ್ಮಿನಬಾವಿ ಕೃಷಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಶ್ರೀಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ, ಧಾರವಾಡ ಭಾರತಿನಗರದ ಶ್ರೀಲಿಂಗರಾಜ ವಿವಿಧೋದ್ದೇಶ ಸಂಸ್ಥೆಯ ಉಪಾಧ್ಯಕ್ಷರಾಗಿ, ಅಮ್ಮಿನಬಾವಿ ಗ್ರಾಮದ ಹಾಗೂ ಹುಬ್ಬಳ್ಳಿ-ಧಾರವಾಡದ ವಿಭಿನ್ನ ಸಂಘ-ಸಂಸ್ಥೆಗಳ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.
ಸಂತಾಪ : ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು, ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು, ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಶಾಶಕರುಗಳಾದ ಎ.ಬಿ.ದೇಸಾಯಿ, ಅಮೃತ ದೇಸಾಯಿ, ಸೀಮಾ ಮಸೂತಿ, ಕಾಂಗ್ರೆಸ್ ಮುಖಂಡರುಗಳಾದ ತವನಪ್ಪ ಅಷ್ಟಗಿ, ಶಿವಲೀಲಾ ವಿನಯ ಕುಲಕರ್ಣಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಎಂ.ಸಿ. ಹುಲ್ಲೂರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧಗಳನ್ನು ಅಗಲಿದ್ದಾರೆ.
ಬುಧವಾರ ಸಂಜೆ ಅಮ್ಮಿನಬಾವಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.


