ಮಂಗಳೂರು, ಜೂ.11: ಅಧಿಕ ಮಾಸದ ಪರಮ ಏಕಾದಶಿ ಅಂಗವಾಗಿ ನಗರದ ವಿ.ಟಿ. ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವು ವಿಶೇಷ ಅಲಂಕಾರದಿಂದ ಕಂಗೊಳಿಸಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
ಶ್ರೀ ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನವೆಂದು ಪರಿಗಣಿಸಲ್ಪಡುವ ಪರಮ ಏಕಾದಶಿಯ ಪ್ರಯುಕ್ತ ದೇವಳವನ್ನು ವಿವಿಧ ತರಕಾರಿಗಳು, ಹಣ್ಣುಗಳು ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿದೆ. ವಿಶೇಷ ಶೃಂಗಾರದಲ್ಲಿ ವಿರಾಜಮಾನರಾಗಿರುವ ಶ್ರೀ ವಿಠೋಭ ಹಾಗೂ ರುಕುಮಾಯಿ ದೇವರ ದಿವ್ಯ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಧಾರ್ಮಿಕ ನಂಬಿಕೆಯ ಪ್ರಕಾರ, ಪರಮ ಏಕಾದಶಿಯಂದು ದೇವರಿಗೆ ಸಲ್ಲಿಸುವ ಪೂಜೆ, ಸೇವೆ ಹಾಗೂ ಭಕ್ತಿಯಿಂದ ಅಧಿಕ ಪುಣ್ಯಫಲ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಅದ್ಭುತ ಅಲಂಕಾರದಿಂದ ಶೋಭಿಸುತ್ತಿರುವ ದೇವಳದ ಸೌಂದರ್ಯ ಭಕ್ತರಲ್ಲಿ ಭಕ್ತಿಭಾವವನ್ನು ಹೆಚ್ಚಿಸುತ್ತಿದ್ದು, ದೇವರ ದರ್ಶನ ಪಡೆಯುವ ಮೂಲಕ ಪರಮ ಏಕಾದಶಿಯ ಪುಣ್ಯಫಲವನ್ನು ಸಂಪಾದಿಸಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಭಕ್ತರಿಗೆ ಮನವಿ ಮಾಡಿದ್ದಾರೆ.


