ಚಿಕ್ಕಮಗಳೂರು: ತರಿಕೆರೆ ತಾಲೂಕಿನ ಲಕ್ಕವಳ್ಳಿ ಮೂಲದ ಮಹಿಳೆಗೆ ಆಕೆಯ ಮಗಳ ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
ಬಂಧಿತ ಆರೋಪಿ ಯೋಗೀಶ್ (25) ಎಂಬಾತ ಬೆಂಗಳೂರು ಮೂಲದವನಾಗಿದ್ದು, ಲಕ್ಕವಳ್ಳಿ ಗ್ರಾಮದ ಯುವತಿಯ ಅಶ್ಲೀಲ ಫೋಟೋವನ್ನು ಆಕೆಯ ತಾಯಿಗೆ ಕಳುಹಿಸಿದ್ದ. ಇದರೊಂದಿಗೆ, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಯೋಗೀಶ್ ರಾತ್ರಿ ವೇಳೆ ಮಹಿಳೆಗೆ ಫೋನ್ ಮಾಡಿ, ಅಶ್ಲೀಲ ಫೋಟೋವನ್ನು ತೋರಿಸಿ ಹಣ ಕೊಡುವಂತೆ ಪೀಡಿಸುತ್ತಿದ್ದ. ಹಲವಾರು ದಿನಗಳವರೆಗೆ ಇದು ಮುಂದುವರಿದಿದ್ದು, ಮಹಿಳೆ ಮಾನಸಿಕವಾಗಿ ಕುಗ್ಗಿದ್ದರು. ಕೊನೆಯದಾಗಿ ಧೈರ್ಯ ಮಾಡಿದ ಮಹಿಳೆ, ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ದೂರು ದಾಖಲಾದ ತಕ್ಷಣವೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದರು. ತಾಂತ್ರಿಕ ಮಾಹಿತಿ ಮತ್ತು ದೂರವಾಣಿ ಕರೆಗಳ ಮೂಲಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿ ಯೋಗೀಶ್ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಟಿ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ ಕಲಂ 67(ಎ), 384, 506 ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಅವನಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

