ಬ್ರಹ್ಮಾವರ : ತಾಯಿಯ ಮಡಿಲಿಗಿಂತ ಸುರಕ್ಷಿತವಾದ ಜಾಗ ಈ ಪ್ರಪಂಚದಲ್ಲಿ ಮತ್ತೊಂದಿಲ್ಲ. ಆದರೆ ಆ ವಿಧಿಯ ಕ್ರೂರ ಆಟಕ್ಕೆ ಆ ತಾಯಿಯ ಮಡಿಲು ಮಗುವನ್ನು ರಕ್ಷಿಸಲಾಗಲಿಲ್ಲ. ಹೆತ್ತ ಒಡಲ ಎದೆಗಪ್ಪಿ ಕುಳಿತಿದ್ದ ಒಂದೂವರೆ ವರ್ಷದ ಮುದ್ದಾದ ಕಂದಮ್ಮನ ಮೇಲೆ ಆಕಸ್ಮಿಕವಾಗಿ ತೆಂಗಿನಕಾಯಿ ಬಿದ್ದು ಪ್ರಾಣ ಕಳೆದುಕೊಂಡ ಅತ್ಯಂತ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜೆ ಗ್ರಾಮದಲ್ಲಿ ನಡೆದಿದೆ.
ಚಾಂತಾರು ಹೆರಂಜೆ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಎರಡನೇ ಪುತ್ರ ದಕ್ಷ ಮೃತಪಟ್ಟ ದುರ್ದೈವಿ. ಮನೆಯ ಸಮೀಪ ತಾಯಿ ಸುಚಿತ್ರಾ ಅವರು ಮಗುವನ್ನು ಎತ್ತಿಕೊಂಡು ಮಡಿಲಲ್ಲಿ ಇಟ್ಟುಕೊಂಡಿದ್ದ ವೇಳೆ, ಸಮೀಪದ ತೆಂಗಿನ ಮರದಿಂದ ಏಕಾಏಕಿ ತೆಂಗಿನಕಾಯಿಯೊಂದು ಉದುರಿ ನೇರವಾಗಿ ಮಗುವಿನ ತಲೆಯ ಮೇಲೆ ಬಿದ್ದಿದೆ. ದೊಡ್ಡ ಪೆಟ್ಟಿನಿಂದಾಗಿ ಮಗು ದಕ್ಷ ತೀವ್ರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾನೆ.

ತಕ್ಷಣವೇ ಸ್ಥಳೀಯರ ಸಹಾಯದಿಂದ ರಕ್ತದ ಮಡುವಿನಲ್ಲಿದ್ದ ಮಗುವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಮಗುವಿನ ಪ್ರಾಣ ಉಳಿಸಲು ಹರಸಾಹಸ ಪಟ್ಟಿದ್ದು, ತುರ್ತು ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ, ತಲೆಗೆ ಬಲವಾದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

