ಕರ್ನಾಟಕ ರಾಜಧಾನಿಯ ಹಿರಿಯ ಸಂಘಟನೆಯಾದ ವಿ. ಕೆ. ಎಂ. ಕಲಾವಿದರು(ರಿ.), ಬೆಂಗಳೂರು ಇದರ ನೇತೃತ್ವದಲ್ಲಿ ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ನಡೆದ ಡಾ. ಬಿ. ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾo ಸ್ಮಾರಕ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾಮೇಳ ರಂಗೋತ್ಸವ ಮತ್ತು ನಿರಂತರ 45ನೇ ವರ್ಷದ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2026 ಜೂನ್ 8 ರಿಂದ 10 ರ ತನಕ ನಡೆಯಿತು.
ಇದರ ಸಮಾರೋಪ ಸಮಾರಂಭದಲ್ಲಿ ಗಡಿನಾಡು ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕಾಗಿ, ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರಿಗೆ ಕರ್ನಾಟಕ ಗಡಿನಾಡು ಸಂಘಟನಾಗಾರರಾಗಿ 35 ವರ್ಷದ ಸೇವೆಗಾಗಿ ಪ್ರತಿಷ್ಠಿತ ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಶ್ರೀಮತಿ ಮಧುರ ಅಶೋಕ ಕುಮಾರ್ ಬೆಂಗಳೂರು, ವಿ.ಕೆ.ಎಂ ಕಲಾವಿದರು(ರಿ.), ಬೆಂಗಳೂರು ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ ಉಪಸ್ಥಿತರಿದ್ದರು.
ಶಿವರಾಮ ಕಾಸರಗೋಡು ಸ್ಥಾಪಕ ಅಧ್ಯಕ್ಷರಾಗಿ 1990 ರಲ್ಲಿ ಸ್ಥಾಪನೆಗೊಂಡ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕಾಸರಗೋಡು ಇದರ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ 2026 ನವಂಬರ್ 7 ಮತ್ತು 8 ರಂದು ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- 2026 ಮತ್ತು ಕೇರಳ -ಕರ್ನಾಟಕ ಉತ್ಸವ, ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವವನ್ನು ಸಂಘಟಿಸುತ್ತಿದ್ದಾರೆ. ಕೇರಳ- ಕರ್ನಾಟಕ ಮತ್ತು ಭಾರತದ ಇತರ ರಾಜ್ಯಗಳಿಂದ ಸುಮಾರು 500ಕ್ಕೂ ಹೆಚ್ಚು ಪ್ರತಿನಿಧಿಗಳು ಸಾಂಸ್ಕೃತಿಕ ನಿಯೋಗದಲ್ಲಿ ಭಾಗವಹಿಸಲಿದ್ದಾರೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ – ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣಕ್ಕೆ 6 ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗುತ್ತಿದೆ.ಕೇರಳ- ಕರ್ನಾಟಕ ಭವನವನ್ನು 2026 ನವಂಬರ್ 4 ರಂದು ಶಿಲಾನ್ಯಾಸಗೈದು ಭೂಮಿ ಪೂಜೆ ಸಲ್ಲಿಸಲಾಗುವುದು. ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಕೃಷಿ ಕುಟೀರ, ಕಾಸರಗೋಡು ಗೋ-ಕುಟೀರ, ಕಾಮಧೇನು- ಕಲ್ಪವೃಕ್ಷ ಗೋ – ವಿಶ್ರಾಂತಿ ಗೃಹವು ಉದ್ಘಾಟನೆಯ ಹಂತದಲ್ಲಿದೆ. ಈಗಾಗಲೇ 25 ಲಕ್ಷ ರೂಪಾಯಿ ವೆಚ್ಚದಲ್ಲಿ 200 ಮಂದಿ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಲು ಅವಕಾಶವಿರುವ ಸಾಂಸ್ಕೃತಿಕ ಭವನ, ಬಯಲು ರಂಗಮಂಟಪದ ಕಾಮಗಾರಿ ಪೂರ್ಣವಾಗಿದೆ.ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ,ಮಹಿಳಾ ಸ್ವ ಉದ್ಯೋಗ ತರಬೇತಿ ಕೇಂದ್ರ, ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆಗಾಗಿ ಗ್ರಾಮೀಣ ಕ್ಲಿನಿಕ್, ಸಾರ್ವಜನಿಕ ಸಂಪರ್ಕ – ಮಾಧ್ಯಮ ಕೇಂದ್ರ,ಭಜನಾ ಸಂಕೀರ್ತನಾ ಕುಟೀರ,ನಮ್ಮ ಮನೆ ವಿಶ್ರಾಂತಿ ಗೃಹ – ರೆಸ್ಟ್ ಹೌಸ್ ನಿರ್ಮಾಣವಾಗುತ್ತಿದೆ. ಸಂಪರ್ಕ :- ಶಿವರಾಮ ಕಾಸರಗೋಡು ಕನ್ನಡ ಗ್ರಾಮ, ಕಾಸರಗೋಡು -671121, ಮೊಬೈಲ್ :-9448572016


