ಮಂಗಳೂರು : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೇಧಾವಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಎನ್ಎಸ್ಯುಐ (NSUI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಹಣ್ಣುಹಂಪಲು ವಿತರಿಸಿ, ಅವರ ಆರೋಗ್ಯ ಶೀಘ್ರ ಸುಧಾರಿಸಲೆಂದು ಹಾರೈಸಲಾಯಿತು. ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಸೇವೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ಎಸ್ಯುಐ ಜಿಲ್ಲಾ ಸಂಘದ ಅಧ್ಯಕ್ಷರಾದ ಸುಹಾನ್ ಆಳ್ವ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಯುವಜನತೆಗೆ ಪ್ರೇರಣೆಯಾಗಿದ್ದು, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಪರವಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎನ್ಎಸ್ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು, ಯುವ ಕಾರ್ಯಕರ್ತರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. ಆಸ್ಪತ್ರೆಯ ರೋಗಿಗಳು ಮತ್ತು ಅವರ ಕುಟುಂಬಸ್ಥರು ಈ ಸೇವಾ ಕಾರ್ಯಕ್ಕೆ ಒಂದು ಸಲಾಂ ಎಂದರು.


