ಫ್ರಾನ್ಸ್ನಲ್ಲಿ ನಡೆದ ಜಿ7 ಶೃಂಗಸಭೆಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವೆ ತೀವ್ರ ವಾಕ್ಸಮರ ಆರಂಭವಾಗಿದೆ.

ಜೂನ್ 15ರಿಂದ 17ರವರೆಗೆ ಫ್ರಾನ್ಸ್ನ ಎವಿಯಾನ್ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಅಮೆರಿಕ ಮತ್ತು ಇಟಲಿಯ ನಾಯಕರು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಇಟಲಿಯ ‘La7 ಟಿವಿ’ ವಾಹಿನಿಗೆ ನೀಡಿದ ವಿಶೇಷ ಫೋನ್ ಸಂದರ್ಶನದಲ್ಲಿ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮೆಲೋನಿ ನನ್ನೊಂದಿಗೆ ಫೋಟೋ ತೆಗೆದುಕೊಳ್ಳಲು ಅಕ್ಷರಶಃ ಬೇಡಿಕೊಂಡರು. ಆಕೆಗೆ ನನ್ನೊಂದಿಗೆ ಫೋಟೋ ಬೇಕೇ ಬೇಕಿತ್ತು. ನನಗೇನೂ ಆಕೆಯೊಂದಿಗೆ ಫೋಟೋ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಆದರೆ, ಆಕೆಯನ್ನು ನೋಡಿ ಪಾಪ ಅನಿಸಿದ್ದರಿಂದ ನಾನು ಫೋಟೋ ಕ್ಲಿಕ್ಕಿಸಿಕೊಳ್ಳಲು ಒಪ್ಪಿಕೊಂಡೆ” ಎಂದಿದ್ದರು.
ಟ್ರಂಪ್ ನೀಡಿರುವ ಹೇಳಿಕೆಯನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತೀವ್ರವಾಗಿ ಖಂಡಿಸಿದ್ದು, ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣ ಕಟ್ಟುಕಥೆ. ಅಮೆರಿಕ ಅಧ್ಯಕ್ಷರು ತಮ್ಮದೇ ಮಿತ್ರರಾಷ್ಟ್ರಗಳ ನಾಯಕರೊಂದಿಗೆ ಈ ರೀತಿ ನಡೆದುಕೊಳ್ಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ಅವರು ತಮ್ಮ ಮಿತ್ರರನ್ನು ಅವಮಾನಿಸುತ್ತಿರುವುದು ಇದೇ ಮೊದಲೇನಲ್ಲ.“ಇದು ಸಂಪೂರ್ಣ ಸುಳ್ಳು, ಇಟಲಿ ಯಾರ ಬಳಿಯೂ ಬೇಡುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಟ್ರಂಪ್ ಅವರ ಈ ಅಹಂಕಾರದ ಹೇಳಿಕೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಟ್ರಂಪ್ ಅವರ ಈ ಹೇಳಿಕೆಯನ್ನು “ಇಡೀ ಇಟಲಿ ದೇಶಕ್ಕೆ ಮಾಡಿದ ಅಪಮಾನ” ಎಂದು ಟೀಕಿಸಿರುವ ಇಟಲಿಯ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಆಂಟೋನಿಯೊ ತಾಜಾನಿ ಟ್ರಂಪ್ ವರ್ತನೆಗೆ ಪ್ರತಿರೋಧವಾಗಿ ಜೂನ್ 21 ಮತ್ತು 22ರಂದು ನಿಗದಿಯಾಗಿದ್ದ ತಮ್ಮ ಅಧಿಕೃತ ಅಮೆರಿಕ ಪ್ರವಾಸವನ್ನು ತಕ್ಷಣವೇ ರದ್ದುಗೊಳಿಸಿದ್ದಾರೆ.

