ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್ʼ ಕೊನೆಗೂ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಹಲವು ತಿಂಗಳ ನಿರೀಕ್ಷೆ, ಊಹಾಪೋಹಗಳು ಮತ್ತು ಎರಡು ಬಾರಿ ಮುಂದೂಡಲ್ಪಟ್ಟಿದ್ದ ರಿಲೀಸ್ ಡೇಟ್ ಬಳಿಕ, ಇದೀಗ ಚಿತ್ರತಂಡವು ಸ್ಪಷ್ಟವಾದ ಫೈನಲ್ ದಿನಾಂಕವನ್ನು ಪ್ರಕಟಿಸಿದೆ. ಈ ಘೋಷಣೆಯಿಂದ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆಮಾಡಿದೆ.
ಈ ಮೊದಲು ಚಿತ್ರವು ಎರಡು ಬಾರಿ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ನಿರ್ಮಾಣ ಕೆಲಸ, ಪೋಸ್ಟ್ ಪ್ರೊಡಕ್ಷನ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಕೆಲಸಗಳ ಕಾರಣದಿಂದಾಗಿ ಬಿಡುಗಡೆ ತಡವಾಗಿತ್ತು ಎಂದು ಚಿತ್ರತಂಡ ತಿಳಿಸಿದೆ. ಆದರೆ ಈಗ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ವಿಶ್ವಮಟ್ಟದ ರಿಲೀಸ್ಗೆ ಸಿದ್ಧತೆ ಅಂತಿಮ ಹಂತದಲ್ಲಿದೆ.

ಚಿತ್ರತಂಡವು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಪೇಜ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದು, “ಟಾಕ್ಸಿಕ್” ಸಿನಿಮಾ ಇದೇ ವರ್ಷದ ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ, ಕನ್ನಡ ಚಿತ್ರರಂಗದಲ್ಲೇ ಅತಿ ದೊಡ್ಡ ಪ್ರಾಜೆಕ್ಟ್ಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ವಿಶ್ವಾದ್ಯಂತ ರಿಲೀಸ್ ಆಗುತ್ತಿರುವುದರಿಂದ ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ಪ್ರತಿಕ್ರಿಯೆ ಪಡೆಯುವ ಸಾಧ್ಯತೆ ಇದೆ. ಆಗಸ್ಟ್ 26ರಂದು ರಿಲೀಸ್ ಆಗಲಿರುವ “ಟಾಕ್ಸಿಕ್” ಸಿನಿಮಾ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಭಾರತೀಯ ಸಿನಿರಂಗಕ್ಕೂ ಮಹತ್ವದ ಮೈಲಿಗಲ್ಲಾಗುವ ನಿರೀಕ್ಷೆ ಹೆಚ್ಚಾಗಿದೆ.


