ಇಸ್ಲಾಮಾಬಾದ್: ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದು, ಭಾರಿ ದುರಂತ ಸಂಭವಿಸಿದೆ. ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದು, ಎಂಟು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ್-ಖೈಬರ್ ಪಸ್ತುನ್ಹಾ ಗಡಿಯ ಬಳಿಯ ಶೆರಾನಿ-ಶೋಬ್ ಹೆದ್ದಾರಿಯಲ್ಲಿರುವ ಡಾನಾ ಸಾರ್ ಪರ್ವತ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಕ್ವೆಟ್ಟಾದಿಂದ ರಾಜಧಾನಿ ಇಸ್ಲಾಮಾಬಾದ್ಗೆ ತೆರಳುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ.

ರಕ್ಷಣಾ ಕಾರ್ಯಕರ್ತರು ಅಪಘಾತ ಸ್ಥಳದಿಂದ ಇಲ್ಲಿಯವರೆಗೆ 40 ಶವಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡ ಎಂಟು ಪ್ರಯಾಣಿಕರನ್ನು ತಜ್ಞ ಚಿಕಿತ್ಸೆಗಾಗಿ ಶೋಬ್ನಲ್ಲಿರುವ ಆಪಘಾತ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಆರು ಆಂಬ್ಯುಲೆನ್ಸ್ಗಳು, 12 ತುರ್ತು ವೈದ್ಯಕೀಯ ತಂತ್ರಜ್ಞರು ಮತ್ತು 10 ಲಘು ಸಾರಿಗೆ ವಾಹನಗಳನ್ನು ನಿಯೋಜಿಸಿದ್ದಾರೆ ಮತ್ತು ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಕಷ್ಟಕರವಾದ ಪರ್ವತ ಭೂಪ್ರದೇಶದಿಂದಾಗಿ ರಕ್ಷಣಾ ಕಾರ್ಯಾಚರಣೆ ತುಂಬಾ ಜಟಿಲವಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಬಸ್ ಓವರ್ಲೋಡ್ ಆಗಿದ್ದು, ವೇಗವಾಗಿ ಚಲಿಸುತ್ತಿತ್ತು. ಬಸ್ ಕ್ವೆಟ್ಟಾದಿಂದ 36 ಪ್ರಯಾಣಿಕರೊಂದಿಗೆ ಹೊರಟಿತ್ತು. ಆದರೆ ದಾರಿಯ ಮಧ್ಯದಲ್ಲಿ ಮತ್ತೊಂದು ಕೆಟ್ಟುಹೋದ ಬಸ್ಸಿನ ಪ್ರಯಾಣಿಕರನ್ನು ಹತ್ತಿಸಿದಾಗ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿತು.ಅಪಘಾತದ ಬಗ್ಗೆ ವರದಿಯಾದ ತಕ್ಷಣ, ಶೆರಾನಿ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸ್ಥಳೀಯ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ತಲುಪಿದರು. ನೆರೆಯ ರಾಜ್ಯವಾದ ಖೈಬರ್ ಪಸ್ತುಾದ ರಕ್ಷಣಾ ಕಾರ್ಯಕರ್ತರು ಸಹ ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಅಪಘಾತದ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮೋಟಾರು ವಾಹನ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ಅಧಿಕೃತ ತನಿಖೆಯನ್ನು ಪ್ರಾರಂಭಿಸಿದ್ದಾರೆ.

