ಅಮ್ಮಿನಬಾವಿ : “ಮಾಂಗಲ್ಯಂ ತಂತುನಾನೇನ ಮಮ ಜೀವನಹೇತುನಾ | ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ ಶರಧಾಂ ಶತಂ…” ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ವೈದಿಕರಾದ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಹಾಗೂ ಎಸ್.ಎಂ. ಪ್ರಶಾಂತ ರಾಜಗುರು ಅವರು ಮಂತ್ರಘೋಷ ಮಾಡಿದ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ವಸುಂಧರಾ ಹೆಣ್ಣು ಕತ್ತೆಗೆ ಮಾಂಗಲ್ಯ ಧಾರಣವಾಗುತ್ತಿದ್ದಂತೆ ಬಿತ್ತಿದ ಭೂಮಿಯಲ್ಲಿ ಬೆಳೆ ಪಲ್ಲವಿಸಲು ಗಂಗೆಯ ಸಾನ್ನಿಧ್ಯ ಬಯಸಿ ಮಾಡಿದ ಶಾಸ್ತ್ರೋಕ್ತ ಕತ್ತೆಗಳ ಮದುವೆಗೆ ಸಾಕ್ಷಿಯಾಗಿದ್ದ ಅಧಿಕ ಸಂಖ್ಯೆಯ ಗ್ರಾಮಸ್ಥರು ಅಕ್ಷತಾರೋಪಣ ಮಾಡಿ ‘ಹರಹರ ಮಹಾದೇವ’ ಎಂದು ಶೃದ್ಧಾ ಭಕ್ತಿಯಿಂದ ಜಯಘೋಷಗೈದರು.

ವಿಶಾಲ ಮದುವೆ ಮಂಟಪದಲ್ಲಿ ವಧು-ವರರ ಕಡೆಯವರ ಸಂಬಂಧಿಗಳಿರಲಿಲ್ಲ; ಜೊತೆಗೆ ತಮ್ಮ ಮಗಳನ್ನು ಕನ್ಯಾದಾನ ಮಾಡಿ ಧಾರೆ ಎರೆಯಲು ವಧುವಿನ ತಂದೆ-ತಾಯಿ ಇರಲಿಲ್ಲ. ಶನಿವಾರ ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೇಘರಾಜ ಮತ್ತು ವಸುಂಧರಾ ಹೆಸರಿನ ಕತ್ತೆಗಳ ವಿವಾಹ ಮಹೋತ್ಸವದಲ್ಲಿ ಎಲ್ಲವನ್ನೂ ಗ್ರಾಮಸ್ಥರೇ ನಿರ್ವಹಿಸಿ ಮದುವೆ ಸುಸೂತ್ರವಾಗಿ ನಡೆಯಲು ಕಾರಣರಾದರು.

ಮಳೆಗಾಗಿ ರೈತರ ಸಂಕಲ್ಪ :
ಶ್ರೀಮಹಾಗಣಪತಿ ಪೂಜೆ, ಶ್ರೀಜಗದ್ಗುರು ಪಂಚಾಚಾರ್ಯರ ಸಾನ್ನಿಧ್ಯದ ಸಾಕ್ಷಿಗಾಗಿ ಸ್ಥಾಪಿಸಿದ್ದ ಪಂಚಕಲಶಗಳ ಪೂಜೆ ಹಾಗೂ ಗಂಗಾಕಲಶ ಪೂಜೆಯ ನಂತರ ಗ್ರಾಮದ ರೈತರು ಮಳೆಗಾಗಿ ವಿಶೇಷ ಪ್ರಾರ್ಥನೆಯ ಸಂಕಲ್ಪ ಪೂಜೆ ನೆರವೇರಿಸಿದರು. ಇದಕ್ಕೂ ಮೊದಲು ಉಭಯ ಕತ್ತೆಗಳಿಗೆ ಅರಿಷಿಣ ಲೇಪನ ಮಾಡಿ ಸೂರಗಿ ನೀರಿನ ಸ್ನಾನ ಮಾಡಿಸಲಾಯಿತು. ನಂತರ ಪಂಚಕಲಶಗಳ ಸನ್ನಿಧಾನದಲ್ಲಿ ಬಾಸಿಂಗ ಧಾರಣೆ, ಕಂಕಣ ಧಾರಣೆ, ಗುಡಜೀರಕ ಸಿಂಚನ, ಕನ್ಯಾದಾನ, ಮಾಂಗಲ್ಯ ಧಾರಣೆ, ಅಕ್ಷತಾ ರೋಪಣ ಮಾಡಲಾಯಿತು. ವಿವಾಹ ಬಂಧನಕ್ಕೆ ಒಳಗಾದ ಉಭಯ ಕತ್ತೆಗಳ ಮೆರವಣಿಗೆ ವಿವಿಧ ಜಾನಪದ ವಾದ್ಯ-ಮೇಳಗಳೊಂದಿಗೆ ಗ್ರಾಮದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಜರುಗಿತು. ಸಂಭ್ರಮದಿಂದ ಕತ್ತೆಗಳ ಮದುವೆ ಮಾಡಿದ ಖುಷಿಯಲ್ಲಿ ಗ್ರಾಮಸ್ಥರು ಶಿರಾ, ಬೂಂದಿ, ಬದನೆಕಾಯಿ ಪಲ್ಯ, ಅನ್ನ ಮತ್ತು ಸಾರನ್ನು ಒಳಗೊಂಡ ನಿಬ್ಬಣದ ಊಟ ಸವಿದರು. ಹಿಂದಿನ ದಿನ (ಶುಕ್ರವಾರ) ರಾತ್ರಿ ಉಭಯ ಕತ್ತೆಗಳ ನಿಶ್ಚಿತಾರ್ಥ ಸಹ ನಡೆದದ್ದು ಈ ಮದುವೆಯ ಮತ್ತೊಂದು ವಿಶೇಷತೆ.

ಕಾಂಗ್ರೆಸ್ ಮುಖಂಡರುಗಳಾದ ತವನಪ್ಪಅಷ್ಟಗಿ, ಪ್ರಶಾಂತ ಕೇಕರೆ, ಈಶ್ವರ ಶಿವಳ್ಳಿ, ಉದ್ಯಮಿ ಮಂಜುನಾಥ ಮಕ್ಕಳಗೇರಿ ಸೇರಿದಂತೆ ಸ್ಥಳೀಯ ವಿವಿಧ ಸಮಾಜಗಳ ಮುಖಂಡರನೇಕರು ಪಾಲ್ಗೊಂಡಿದ್ದರು.

ಮುಂಗಾರು ಮಳೆಯನ್ನೇ ನಂಬಿರುವ ರೈತರು ಈಗಾಗಲೇ ಬಹುಪಾಲು ಬಿತ್ತನೆ ಕಾರ್ಯ ಮುಗಿಸಿದ್ದು, ಈಗ ಅಗತ್ಯಕ್ಕೆ ತಕ್ಕಂತೆ ಮಳೆಯ ತೀವ್ರ ಕೊರತೆಯಿಂದಾಗಿ ಜಮೀನುಗಳು ಹಸಿರು ಸಂಭ್ರಮ ಕಳೆದುಕೊಂಡು ಬರಡಾಗಿವೆ. ಈ ಸಂದರ್ಭದಲ್ಲಿ ರೈತರು ತಮ್ಮ ಹಳ್ಳಿಗಾಡಿನ ವಿವಿಧ ಪಾರಂಪರಿಕ ಆಚರಣೆಗಳ ಮೂಲಕ ಮಹಾದೇವನ ಮೊರೆ ಹೋಗಲು ಮಾಡಿದ ಈ ಕತ್ತೆಗಳ ಮದುವೆಯು ಇಂದಿನ ಪ್ರಖರ ವೈಜ್ಞಾನಿಕ ಡಿಸಿಟಲ್ ಕ್ರಾಂತಿಯ ಯುಗದಲ್ಲಿಯೂ ಭಾರತೀಯರ ಧಾರ್ಮಿಕ ನಂಬಿಕೆಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತದೆ.

