ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಫೇಸ್ಬುಕ್ನಲ್ಲಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ವಿಷಯ ಬೆಳಕಿಗೆ ಬಂದಿದ್ದು, ಆಸ್ಟ್ರೇಲಿಯಾ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.
ಜುಲೈ 9ರಂದು ಮೆಲ್ಬೋರ್ನ್ನ ಮಾರ್ವೆಲ್ ಸ್ಟೇಡಿಯಂನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಇದಕ್ಕಾಗಿ ಮೆಲ್ಬೋರ್ನ್ ಮೀಟ್ಸ್ ಮೋದಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಹಾಕಲಾಗಿದ್ದ ಫೇಸ್ಬುಕ್ ಪೋಸ್ಟ್ನ ಕಾಮೆಂಟ್ ವಿಭಾಗದಲ್ಲಿ ಈ ಬೆದರಿಕೆ ಸಂದೇಶ ಕಾಣಿಸಿಕೊಂಡಿದೆ.
ಅಬು ಮುಸ್ತಫಾ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಅರೇಬಿಕ್ ಮತ್ತು ಇಂಗ್ಲಿಷ್ನಲ್ಲಿ ಕಾಮೆಂಟ್ ಮಾಡಲಾಗಿದ್ದು, ಆರೋಪಿ ತನ್ನ ಕಮೆಂಟ್ನಲ್ಲಿ ಈ ಕಾರ್ಯಕ್ರಮದ ಸಮಯದಲ್ಲಿ ಕ್ರೀಡಾಂಗಣದ ಛಾವಣಿ ಮುಚ್ಚುವುದು ಉತ್ತಮ, ಇಲ್ಲದಿದ್ದರೆ ಪ್ರಧಾನಿಯವರು ಸಾಯುವುದಕ್ಕಾಗಿ ಆಸ್ಟ್ರೇಲಿಯಾಗೆ ಬರುತ್ತಾರೆ ಎಂದು ಎಚ್ಚರಿಸಿದ್ದಾನೆ. ತಕ್ಷಣ ಕಾರ್ಯಕ್ರಮದ ಸಂಘಟಕರು ಕಮೆಂಟ್ ಬಗ್ಗೆ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಈ ಸಂದೇಶವು ಸ್ಟೇಡಿಯಂನಲ್ಲಿ ದಾಳಿ ನಡೆಸುವ ಮುನ್ಸೂಚನೆಯಂತೆ ಇರುವುದರಿಂದ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ. ತನಿಖಾಧಿಕಾರಿಗಳು ಈ ಕಾಮೆಂಟ್ ಹಾಕಲಾದ ಫೇಸ್ಬುಕ್ ಖಾತೆಯ ಐಪಿ ವಿಳಾಸವನ್ನು ಈಗಾಗಲೇ ಪತ್ತೆಹಚ್ಚಿದ್ದು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.
ಈ ಬೆದರಿಕೆಯ ವಿಷಯವು ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ದೇಶಗಳಲ್ಲಿ ಸಂಚಲನ ಮೂಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಪ್ರಧಾನಿಯವರ ಭದ್ರತೆಗೆ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳುವಂತೆ ಕೋರಿದೆ. ಆಸ್ಟ್ರೇಲಿಯನ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿ, ಪ್ರಧಾನಿ ಮೋದಿಯವರ ಆಗಮನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

