ಮಂಗಳೂರು : ವಿಶ್ವಾಸ, ಕರಕುಶಲತೆ ಹಾಗೂ ಗುಣಮಟ್ಟದ ಸೇವೆಯ ನಾಲ್ಕು ದಶಕಗಳ ಯಶಸ್ವಿ ಪಯಣವನ್ನು ಆಚರಿಸುತ್ತಿರುವ ಬಿಂದು ಜ್ಯುವೆಲ್ಲರಿಯ ವಿಶೇಷ ವಧು ಪ್ರತಿಭಾ ಅನ್ವೇಷಣಾ ಕಾರ್ಯಕ್ರಮ ‘ಬಿ ದಿ ಬಿಂದು ಬ್ರೈಡ್’ ಗ್ರ್ಯಾಂಡ್ ಫಿನಾಲೆ ಜುಲೈ 12ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ನಗರದ ಎಕ್ಕೂರಿನ ಎ.ಜೆ.ಗ್ರ್ಯಾಂಡ್ ಎಲೈಟ್ ಹೋಟೆಲ್ನಲ್ಲಿ ನಡೆಯಲಿದೆ ಎಂದು ಬಿಂದು ಜ್ಯುವೆಲ್ಲರಿಯ ಮಾರುಕಟ್ಟೆ ವಿಭಾಗದ ಪ್ರಮುಖ ಅಭಿಷೇಕ್ ಆಳ್ವ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಆಭರಣ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿ ವಧು ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಿಂದು ಜ್ಯುವೆಲ್ಲರಿಯ ವಿವಿಧ ಶೋರೂಂಗಳಲ್ಲಿ 11 ದಿನಗಳ ಕಾಲ ನಡೆದ ಅಭಿಯಾನಕ್ಕೆ 500ಕ್ಕೂ ಹೆಚ್ಚು ಯುವತಿಯರು ನೋಂದಾಯಿಸಿದ್ದು, ಆಯ್ಕೆ ಪ್ರಕ್ರಿಯೆಯ ಬಳಿಕ 233 ಮಂದಿ ಸ್ಪರ್ಧಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದರು. ಅಂತಿಮವಾಗಿ ಅವರಲ್ಲಿ 20 ಮಂದಿ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದು ‘ಬಿ ದಿ ಬಿಂದು ಬ್ರೈಡ್’ ಪಟ್ಟಕ್ಕಾಗಿ ಸ್ಪರ್ದಿಸಲಿದ್ದಾರೆ ಎಂದರು.

‘ಬಿ ದಿ ಬಿಂದು ಬ್ರೈಡ್’ ಕಾರ್ಯಕ್ರಮವು ಸಾಮಾನ್ಯ ಕುಟುಂಬಗಳ ಯುವತಿಯರು ಹಾಗೂ ವಧುವಾಗುವ ಕನಸು ಹೊಂದಿರುವ ಮಹಿಳೆಯರಿಗೆ ವೃತ್ತಿಪರ ಫ್ಯಾಷನ್ ಹಾಗೂ ಬ್ರ್ಯಾಂಡ್ ಪ್ರತಿನಿಧಿತ್ವ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಪರೂಪದ ಅವಕಾಶ ಕಲ್ಪಿಸಿದೆ. ಸ್ಪರ್ಧಿಗಳಿಗೆ ವಧು ಅಲಂಕಾರ, ಗ್ರೂಮಿಂಗ್, ವೃತ್ತಿಪರ ಫೋಟೋಶೂಟ್, ವೇದಿಕೆ ನಿರ್ವಹಣೆ ಹಾಗೂ ಕ್ಷೇತ್ರದ ಪರಿಣಿತರೊಂದಿಗೆ ಸಂವಾದ ಸೇರಿದಂತೆ ವಿವಿಧ ಹಂತಗಳ ವಿಶೇಷ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಆಡಿಷನ್, ಗ್ರೂಮಿಂಗ್, ಫೋಟೋಶೂಟ್ ಹಾಗೂ ಮೌಲ್ಯಮಾಪನದ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಂತಿಮ ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ತೀರ್ಪುಗಾರರ ಮುಂದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ವಿಜೇತೆಯು ಬಿಂದು ಜ್ಯುವೆಲ್ಲರಿಯ ಅಧಿಕೃತ ಬ್ರ್ಯಾಂಡ್ ಮಾಡೆಲ್ ಆಗಿ ಆಯ್ಕೆಯಾಗಲಿದ್ದು, ಸಂಸ್ಥೆಯ ಜಾಹೀರಾತು, ಪ್ರಚಾರ ಹಾಗೂ ವಿವಿಧ ಮಾರ್ಕೆಟಿಂಗ್ ಅಭಿಯಾನಗಳಲ್ಲಿ ಬ್ರ್ಯಾಂಡ್ ಅನ್ನು ಪ್ರತಿನಿಧಿಸುವ ಅವಕಾಶ ಪಡೆಯಲಿದ್ದಾರೆ ಎಂದು ಅಭಿಷೇಕ್ ಆಳ್ವ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಂದು ಜ್ಯುವೆಲ್ಲರಿಯ ಪ್ರಮುಖರಾದ ಮುನಾವರ್, ದೀಕ್ಷಿತ್, ಧೀರಜ್ ಹಾಗೂ ಶ್ವೇತಾ ಉಪಸ್ಥಿತರಿದ್ದರು.

