ಮಂಗಳೂರು : 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಮಿಥ್ಯ’ ಕನ್ನಡ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಂತಸ ಮತ್ತು ಕಲಾ ಪಯಣದ ಅನುಭವವನ್ನು ಹಂಚಿಕೊಂಡರು.
ಪ್ರಶಸ್ತಿ ಕುರಿತು ಮಾತನಾಡಿದ ಅವರು, “ಈ ಗೌರವ ನನಗೆ ಮಾತ್ರ ಸಿಕ್ಕ ಪ್ರಶಸ್ತಿಯಲ್ಲ, ಇಡೀ ‘ಮಿಥ್ಯ’ ಚಿತ್ರದ ತಂಡದ ಪರಿಶ್ರಮಕ್ಕೆ ದೊರೆತ ಮನ್ನಣೆಯಾಗಿದೆ. ನನ್ನ ಕಲಾ ಪಯಣದಲ್ಲಿ ನಿರಂತರ ಬೆಂಬಲ ನೀಡಿದ ಮಾಧ್ಯಮ ಮಿತ್ರರೊಂದಿಗೆ ಈ ಸಂತೋಷವನ್ನು ಮೊದಲು ಹಂಚಿಕೊಳ್ಳಬೇಕೆಂಬ ಉದ್ದೇಶದಿಂದಲೇ ಪತ್ರಿಕಾಗೋಷ್ಠಿ ಆಯೋಜಿಸಿದ್ದೇನೆ ಎಂದರು.

ಚಿತ್ರದ ನಿರ್ದೇಶಕ ಸುಮಂತ್ ಭಟ್ ಅವರಿಗೆ ಪ್ರಶಸ್ತಿಯ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದ ರೂಪಶ್ರೀ, “ನಾನು ಇದುವರೆಗೆ ಮಾಡಿರದ ವಿಭಿನ್ನ ಪಾತ್ರವನ್ನು ನೀಡಿ, ನನ್ನಿಂದ ಹೊಸ ರೀತಿಯ ಅಭಿನಯವನ್ನು ಹೊರತಂದವರು ನಿರ್ದೇಶಕರು. ಅವರ ಮಾರ್ಗದರ್ಶನದಿಂದಲೇ ಪಾತ್ರ ಸಹಜವಾಗಿ ಮೂಡಿಬಂದಿದೆ. ಈ ಸಾಧನೆಗೆ ಅವರಿಗೆ ನಾನು ಸದಾ ಋಣಿಯಾಗಿದ್ದೇನೆ,” ಎಂದು ತಿಳಿಸಿದರು.
ಕಳೆದ ಎರಡೂವರೆ ದಶಕಗಳಿಂದ ಕನ್ನಡ ಹಾಗೂ ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ರೂಪಶ್ರೀ ವರ್ಕಾಡಿ, 700ಕ್ಕೂ ಹೆಚ್ಚು ನಾಟಕಗಳಲ್ಲಿ 4,000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದಾರೆ. ತುಳು, ಕನ್ನಡ, ಕೊಂಕಣಿ ಸೇರಿದಂತೆ 85ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಹಲವು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಗೌರವಗಳಿಗೆ ಭಾಜನರಾಗಿದ್ದಾರೆ.

ರಾಷ್ಟ್ರ ಪ್ರಶಸ್ತಿ ತಮ್ಮ ಜೀವನದ ಅತ್ಯಂತ ಮಹತ್ವದ ಕ್ಷಣವಾಗಿದ್ದು, ಈ ಸಾಧನೆಗೆ ಬೆಂಬಲ ನೀಡಿದ ಮಾಧ್ಯಮ ಮಿತ್ರರು, ಕಲಾಭಿಮಾನಿಗಳು ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ಮುಂದಿನ ದಿನಗಳಲ್ಲಿಯೂ ಉತ್ತಮ ಕಲಾಸೇವೆ ಮೂಲಕ ಮತ್ತಷ್ಟು ಸಾಧನೆ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ‘ಮಿಥ್ಯ’ ಚಿತ್ರದ ನಿರ್ದೇಶಕ ಸುಮಂತ್ ಭಟ್ ಹಾಗೂ ಬಾಲನಟ ಅತೀಶ್ ಶೆಟ್ಟಿ ಉಪಸ್ಥಿತರಿದ್ದರು.

