ಕೀವ್ : ಉಕ್ರೇನ್ ಬಂದರು ಬಳಿ ಸರಕು ಸಾಗಣೆ ಹಡಗು ಎಂ.ವಿ ಗೋಲ್ಡನ್ ಲಿಯೋ ಮೇಲೆ ರಷ್ಯಾ ದಾಳಿ ನಡೆಸಿದ ಪರಿಣಾಮ ನಾಲ್ವರು ಭಾರತೀಯರಲ್ಲಿ ಕೇರಳದ 26 ವರ್ಷದ ನಾವಿಕ ಅಖಿಲ್ ಜೋಯನ್ ಸಾವನ್ನಪ್ಪಿದ್ದಾರೆ. ಎರಡು ತಿಂಗಳಲ್ಲಿ ಮದುವೆಯಾಗ ಬೇಕಾಗಿದ್ದ ಮತ್ತು ಕೆಲಸ ಬದಲಾಯಿಸಲು ಯೋಜಿಸಿದ್ದ ನಾವಿಕ ಮನೆಗೆ ಮರಳುವ ಕೆಲವು ದಿನಗಳ ಮೊದಲೇ ದುರಂತ ಸಾವನ್ನಪ್ಪಿದ್ದಾರೆ.
ಉಕ್ರೇನ್ ಒಡೆಸಾ ಬಂದರಿನಿಂದ ಹೊರಡುವಾಗ ಹಡಗಿನ ಮೇಲೆ ದಾಳಿ ನಡೆದಿದೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ. ಹಡಗಿನಲ್ಲಿ ಐದು ಭಾರತೀಯರು ಸೇರಿದಂತೆ 17 ಸಿಬ್ಬಂದಿ ಇದ್ದರು. ದಾಳಿಯಲ್ಲಿ ಒಬ್ಬ ಭಾರತೀಯ ಸಿಬ್ಬಂದಿ ಬದುಕುಳಿದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಖಿಲ್ ಜೋಯನ್ ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕುಂಡು ಗ್ರಾಮದವರಾಗಿದ್ದು, ಚೆನ್ನೈನಲ್ಲಿ ನಾಟಿಕಲ್ ಸೈನ್ಸ್ ಕೋರ್ಸ್ ಮುಗಿಸಿದ ನಂತರ ಕಳೆದ ಆರು ವರ್ಷಗಳಿಂದ ಎಂವಿ ಗೋಲ್ಡನ್ ಲಿಯೋದಲ್ಲಿ ನಾವಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಒಂದು ತಿಂಗಳ ಹಿಂದೆಯಷ್ಟೇ ಆಲಪ್ಪುಳ ಜಿಲ್ಲೆಯ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಮತ್ತು ಮುಂಬರುವ ತಿಂಗಳುಗಳಲ್ಲಿ ನಡೆಯಬೇಕಿದ್ದ ಅವರ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು.
ಅಖಿಲ್ 19 ನೇ ವಯಸ್ಸಿನಲ್ಲಿ ಮರ್ಚೆಂಟ್ ನೌಕಾಪಡೆಗೆ ಸೇರಿದರು ಮತ್ತು ಕುಟುಂಬದ ಏಕೈಕ ಜೀವನಾಧಾರವಾಗಿದ್ದರು. ಜೋಯನ್ ಮತ್ತು ಸ್ಯಾಲಿ ದಂಪತಿಯ ಏಕೈಕ ಪುತ್ರನಾಗಿದ್ದ ಅವರು, ಇತ್ತೀಚೆಗೆ ಅವರ ಪೋಷಕರು ಅವರ ಬೆಂಬಲದಿಂದ ಮನೆ ನಿರ್ಮಿಸಿದ್ದರು.

ಅವರು ಸ್ಥಳೀಯವಾಗಿ ಹಗ್ಗ ಜಗ್ಗಾಟದ ಆಟಗಾರರಾಗಿ ಪ್ರಸಿದ್ಧರಾಗಿದ್ದರು 30 ಸೆಕೆಂಡುಗಳಲ್ಲಿ ಪೂರ್ಣಗೊಂಡ ಗರಿಷ್ಠ ಹಗ್ಗ ಪುಲ್-ಅಪ್ಗಳಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಸೋಮವಾರ ಸಂಜೆ ಹಡಗು ಕಂಪನಿ ಕಳುಹಿಸಿದ ಇಮೇಲ್ ಮೂಲಕ ಅವರ ಸಾವಿನ ಬಗ್ಗೆ ಕುಟುಂಬಕ್ಕೆ ತಿಳಿದುಬಂದಿದೆ.

