ಸಂಗ್ರೂರ್ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಂಜಾಬ್ನ ಸಂಗ್ರೂರ್ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಹೊರಡಿಸಿದೆ. 2026ರ ಸೆಪ್ಟೆಂಬರ್ 19ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆಯುವಂತೆ ಖರ್ಗೆಗೆ ಸೂಚನೆ ನೀಡಲಾಗಿದೆ. ಸಂಗ್ರೂರ್ ನಿವಾಸಿ ಹಾಗೂ ಬಜರಂಗ ದಳದ ಕಾರ್ಯಕರ್ತ ಹಿತೇಶ್ ಭಾರದ್ವಾಜ್ 2023ರಲ್ಲಿ ದಾಖಲಿಸಿದ್ದ ಮಾನಹಾನಿ ದೂರಿನ ಆಧಾರದ ಮೇಲೆ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ ಈ ದೂರು ಸಲ್ಲಿಸಲಾಗಿತ್ತು.
ದೂರುದಾರ ಹಿತೇಶ್ ಭಾರದ್ವಾಜ್ ರ ಆರೋಪದ ಪ್ರಕಾರ, ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸೇರಿದಂತೆ ಇತರ ಸಂಘಟನೆಗಳೊಂದಿಗೆ ಹೋಲಿಕೆ ಮಾಡಿತ್ತು. ಇದರಿಂದ ಬಜರಂಗ ದಳದ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದರು. ಅಕ್ರಮ ಸಂಘಟನೆಗಳೊಂದಿಗೆ ಬಜರಂಗ ದಳವನ್ನು ಸಂಪರ್ಕಿಸಿರುವುದರಿಂದ ಅದರ ಸದಸ್ಯರು ಮತ್ತು ಬೆಂಬಲಿಗರ ಮಾನಹಾನಿಯಾಗಿದೆ ಎಂದು ಭಾರದ್ವಾಜ್ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ 100 ಕೋಟಿ ಮಾನಹಾನಿ ಪರಿಹಾರ ಹಾಗೂ 10 ಲಕ್ಷ ಕಾನೂನು ವೆಚ್ಚ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗ ದಳ, PFI ಹಾಗೂ ಇತರ ದ್ವೇಷ ಹರಡುವ ಸಂಘಟನೆಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿತ್ತು. ಈ ಹೇಳಿಕೆ ದೇಶಾದ್ಯಂತ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಹಿತೇಶ್ ಭಾರದ್ವಾಜ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ್ದರು.
ಈ ಹಿಂದೆ ನ್ಯಾಯಾಲಯವು ಪ್ರಕರಣವನ್ನು ನಾಗರಿಕ (ಸಿವಿಲ್) ಸ್ವರೂಪದ್ದೆಂದು ಪರಿಗಣಿಸಿತ್ತು. ಆದರೆ ಈಗ ಇದನ್ನು ಕ್ರಿಮಿನಲ್ ಪ್ರಕರಣವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದೆ. ಸೆಪ್ಟೆಂಬರ್ 19ರಂದು ಮಲ್ಲಿಕಾರ್ಜುನ ಖರ್ಗೆ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ, ಅವರ ವಿರುದ್ಧ ಜಾಮೀನುರಹಿತ ವಾರಂಟ್ (NBW) ಹೊರಡಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

