ಮಂಗಳೂರು : 2015 ನೇ ಇಸವಿಯಲ್ಲಿ ಮಂಗಳೂರು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ನೇರ ಭಾಗಿಯಾಗಿ ದಸ್ತಗಿರಿಯಾಗದೇ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚುಂಕಿ ಆಕಾಶಭವನ ಯಾನೆ ಸಂತೋಷ್.ಎಸ್ (34) ಬಂಧಿತ ಆರೋಪಿ, ಈತ 2015ರಲ್ಲಿ ಮಂಗಳೂರು ನಗರದ ಆಕಾಶಭವನದಲ್ಲಿ ನಡೆದ ಮದುವೆಯ ಮದಿರಂಗಿ ಶಾಸ್ತ್ರದ ಸಂದರ್ಭದಲ್ಲಿ ಅಶೋಕ ಕುಮಾರ ಕೊಟ್ಟಾರಿ ಹಾಗೂ ಆರೋಪಿ ಜಗ್ಗು ಎಂಬುವರ ನಡುವೆ ಮಾತಿನ ಚಕಮಕಿ ನಡೆದ ಸಂಧರ್ಭದಲ್ಲಿ ಪ್ರಮುಖ ಆರೋಪಿಯಾದ ಚುಂಕಿ ಆಕಾಶಭವನ @ ಸಂತೋಷನು ಇತರ ಆರೋಪಿಗಳಾದ ರಂಜಿತ್, ಧನು, ಧೂಮ, ಸ್ವೀಟಿ @ ನರೇಶ್ ಮತ್ತು ಜಗ್ಗು ರವರ ಜೊತೆ ಸೇರಿಕೊಂಡು ಅಶೋಕ ಕುಮಾರ ಕೊಟ್ಟಾರಿ ರವರಿಗೆ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರ ಗಾಯವನ್ಟುಂಟು ಮಾಡಿ ಕೊಲೆಯತ್ನ ನಡೆಸಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 135/2015 ರಂತೆ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಚುಂಕಿ ಆಕಾಶಭವನ ಎಂಬಾತನು ಪ್ರಕರಣ ದಾಖಲಾದ ದಿನದಿಂದ ದಸ್ತಗಿರಿಗೆ ಸಿಗದೇ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಆತನ ವಿರುದ್ಧ 25/2025 ರಂತೆ ಎಲ್ಪಿಸಿ (LPC) ವಾರಂಟ್ ಹೊರಡಿಸಿತ್ತು.
ಯಾವುದೇ ಸುಳಿವು ಇಲ್ಲದ ಈತನ ಬಗ್ಗೆ ಬಹಳ ಸಮಯದಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಸಿಸಿಬಿ ಪೊಲೀಸರಿಗೆ ಈತನು ಶಿವಮೊಗ್ಗದಲ್ಲಿ ಇದ್ದಾನೆಂದು ಖಚಿತ ಮಾಹಿತಿ ಸಂಗ್ರಹಿಸಿಕೊಂಡು ದಿನಾಂಕ 29-07-2026 ರಂದು ಈತನನ್ನು ಹಾವೇರಿ ಜಿಲ್ಲೆಯ ಚಿಕ್ಕೆರೂರು ಎಂಬಲ್ಲಿ ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು

