ಮಂಗಳೂರು : ಸಂದೀಪ್ ಬೆದ್ರ ನಿರ್ದೇಶನದ ಗೋಲ್ಡನ್ ಮೂವೀಸ್ ಬ್ಯಾನರ್ನಲ್ಲಿ ತಯಾರಾದ ದ್ವಿಭಾಷಾ ಚಲನಚಿತ್ರ ‘ಪಿಕ್ಚರ್‘ ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಿಡಿ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಕ್ಕೆ ಮಂಗಳೂರು, ಪುತ್ತೂರು ಮತ್ತು ಉಡುಪಿಯ ಪ್ರೀಮಿಯರ್ ಪ್ರದರ್ಶನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತುಳು ಚಿತ್ರರಂಗದ ಹಿರಿಯ ಕಲಾವಿದರು ಹಾಗೂ ತಾಂತ್ರಿಕ ತಂಡದ ಸಹಕಾರದಿಂದ ಚಿತ್ರ ಬಹಳ ಸುಂದರವಾಗಿ ಮೂಡಿಬಂದಿದೆ ಎಂದು ಹೇಳಿದರು.

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನದಿಂದ ಈ ಚಿತ್ರ ನಿರ್ಮಿಸಿದ್ದು, ಹೊಸ ಪ್ರತಿಭೆಗಳ ಜೊತೆಗೆ ತುಳುನಾಡಿನ ಹಿರಿಯ, ಕಿರಿಯ ಕಲಾವಿದರನ್ನು ಈ ಚಿತ್ರದಲ್ಲಿ ಒಗ್ಗೂಡಿಸಿರುವುದು ವಿಶೇಷ ಎಂದರು. ಕುಟುಂಬದ ಎಲ್ಲಾ ವರ್ಗದ ಜನರಿಗೆ ಈ ಚಿತ್ರವು ಇಷ್ಟವಾಗಲಿದ್ದು ಎಲ್ಲರೂ ಬಂದು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ಹೇಳಿದರು

ದೇವದಾಸ್ ಕಾಪಿಕಾಡ್ ಮಾತನಾಡಿ, ತುಳು ಚಿತ್ರರಂಗಕ್ಕೆ ‘ಪಿಕ್ಚರ್’ ಮತ್ತೊಂದು ಉತ್ತಮ ಕೊಡುಗೆಯಾಗಲಿದ್ದು, ಈ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಹೊಸ ನಾಯಕ ನಟನ ಪ್ರವೇಶವಾಗಿದೆ, ನಾಯಕನಾಗಿ ನಿತ್ಯಪ್ರಕಾಶ್ ಬಂಟ್ವಾಳ್ ಉತ್ತಮ ಅಭಿನಯ ನೀಡಿದ್ದಾರೆ ಎಂದು ಪ್ರಶಂಸಿದರು, ಅಲ್ಲದೆ ಗೋಲ್ಡನ್ ಮೂವೀಸ್ ನ ಮೂಲಕ ಇನ್ನೂ ಅನೇಕ ತುಳು ಚಿತ್ರಗಳು ಮೂಡಿ ಬರಲಿ ಎಂದು ಹಾರೈಸಿದರು.

ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಹಾಗೂ ಅಮೃತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಪುಷ್ಪರಾಜ್ ಬೊಳ್ಳಾರ್ ಮತ್ತು ಅರ್ಜುನ್ ಕಾಪಿಕಾಡ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ.ಎಸ್.ಛಾಯಾಗ್ರಹಣ, ಸ್ಯಾಮ್ಯುಯೆಲ್ ಅಬಿ ಸಂಗೀತ ಸಂಯೋಜನೆ ನೀಡಿದ್ದಾರೆ.



ಸುದ್ದಿಗೋಷ್ಠಿಯಲ್ಲಿ ನಾಯಕ ನಿತ್ಯಪ್ರಕಾಶ್ ಬಂಟ್ವಾಳ್, ನಾಯಕಿ ಅಮೃತಾ, ಸಿನೆಮಾ ರಂಗದ ಪ್ರಮುಖರಾದ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರ್ಜುನ್ ಕಾಪಿಕಾಡ್, ಸ್ಯಾಮ್ಯುಯೆಲ್ ಅಬಿ, ಸಚಿನ್ ಉಪ್ಪಿನಂಗಡಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

