ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಎಂದರೆ ಮತ್ತೊಂದು ರಜಾದಿನ ಎನ್ನುವ ಮನೋಭಾವನೆ ಸಲ್ಲದು. ಅದು ದೇಶ ಸ್ವಾತಂತ್ರ್ಯ ಗಳಿಸಿಕೊಳ್ಳುವಲ್ಲಿ ಶ್ರಮಿಸಿದ ಹಿರಿಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುವುದರ ಜತೆಗೆ ಶಿಕ್ಷಣದ ಸದುಪಯೋಗದ ಮೂಲಕ ಸ್ವಾತಂತ್ರ್ಯವನ್ನು ಸಂಭ್ರಮಿಸುವಂತಾಗಬೇಕು ಎಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಎಂ.ರಂಗನಾಥ ಭಟ್ ಹೇಳಿದರು.
ಅವರು ಶನಿವಾರ ಕಾಲೇಜಿನ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಭುವನೇಂದ್ರ ಹಾಲ್ ಸ್ವಾತಂತ್ರ್ಯ ಹೋರಾಟದ ಸಂಘಟನಾ ಸಭೆಗಳಿಗೆ ವೇದಿಕೆಯಾಗಿ ಇಂದಿಗೂ ನಮ್ಮ ನಡುವೆ ಮಧುರ ನೆನಪುಗಳೊಂದಿಗೆ ಸ್ಮಾರಕವಾಗಿ ಉಳಿದಿದೆ ಎಂದವರು ಹೇಳಿದರು.

ವಂದೇ ಮಾತರಂ ಸಮೂಹ ಗಾನದೊಂದಿಗೆ ಆರಂಭವಾದ ಸಮಾರಂಭದಲ್ಲಿ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ಸಹಪ್ರಾಧ್ಯಾಪಕಿ ಸರಿತಾ ಸುವರ್ಣ ಹಾಗೂ ವಿದ್ಯಾರ್ಥಿನಿಯರಾದ ಮನ್ವಿತಾ , ಕವನಾ ದೇಶ ಭಕ್ತಿ ಗೀತೆ ಹಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಡೇಮಿಯನ್ ಎ. ಡಿಮೆಲ್ಲೋ, ಡೀನ್ಸ್ ಗಳು, ವಿಭಾಗ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಮತಿ ಶ್ರೇಯಾ ಭಕ್ತ ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿನಿ ಶ್ರೇಯಾ ನಯುಕ್ತಾ ವಂದಿಸಿದರು.

