ನವದೆಹಲಿ : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹಿನ್ನಡೆ ಎದುರಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದ್ದು, ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವ ನಿರ್ದೇಶನವನ್ನು ಮುಂದುವರಿಸಿದೆ. ಮುಂಗಾರು ಮಳೆ ಕೊರತೆಯಿಂದ ಈಗಾಗಲೇ ಜಲಾಶಯಗಳ ಸಂಗ್ರಹದ ಬಗ್ಗೆ ಆತಂಕ ಎದುರಿಸುತ್ತಿರುವ ರಾಜ್ಯಕ್ಕೆ ಈ ಬೆಳವಣಿಗೆ ಮತ್ತಷ್ಟು ಸವಾಲು ತಂದಿದೆ. ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, CWMA ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ.
ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡಿನ ವಾದ CWMA ಕರ್ನಾಟಕದಿಂದ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ ಎಂದು ತಮಿಳುನಾಡು ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದೆ. ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್ನಷ್ಟು ನೀರು ಬರುತ್ತಿದ್ದು, ಈವರೆಗೆ ಸುಮಾರು 13ರಿಂದ 14 ಟಿಎಂಸಿ ನೀರು ಮಾತ್ರ ಲಭಿಸಿದೆ ಎಂದು ತಮಿಳುನಾಡು ತನ್ನ ವಾದದಲ್ಲಿ ತಿಳಿಸಿದೆ.ಈ ಹಿನ್ನೆಲೆಯಲ್ಲಿ CWMA ಆದೇಶವನ್ನು ಜಾರಿಗೊಳಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಕರ್ನಾಟಕದ ವಾದವೇನು? ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ರಾಜ್ಯ ಈಗಾಗಲೇ ಸುಮಾರು 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. CWMA ಆದೇಶ ಪಾಲಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಬಿಳಿಗುಂಡ್ಲು ಗೇಜ್ ಕೇಂದ್ರದಲ್ಲಿ 12 ಸಾವಿರ ಕ್ಯೂಸೆಕ್ ಪ್ರಮಾಣ ದಾಖಲಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಇದಲ್ಲದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಅನಿಶ್ಚಿತವಾಗಿದ್ದು, ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿರಂತರವಾಗಿ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವುದು ರಾಜ್ಯದ ಕುಡಿಯುವ ನೀರು ಹಾಗೂ ನೀರಾವರಿ ಅಗತ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕರ್ನಾಟಕದ ಪರವಾಗಿ ವಾದಿಸಲಾಯಿತು.

