ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ-2026’ ಉದ್ಯೋಗ ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಎರಡು ದಿನಗಳ ಮೇಳದಲ್ಲಿ 332 ಕಂಪನಿಗಳು ಹಾಗೂ 15,539 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು ಎಂದು ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.

ಮೇಳದಲ್ಲಿ 2,416 ಮಂದಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ ದೊರೆತಿದ್ದು, 6,183 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಶಾರ್ಟ್ಲಿಸ್ಟ್ ಆಗಿದ್ದಾರೆ. 301 ಕಂಪನಿಗಳ ಫಲಿತಾಂಶಗಳನ್ನು ಈಗಾಗಲೇ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಉತ್ಪಾದನಾ ಕ್ಷೇತ್ರದ 75 ಕಂಪನಿಗಳು ಭಾಗವಹಿಸಿ 523 ಮಂದಿಯನ್ನು ಆಯ್ಕೆ ಮಾಡಿಕೊಂಡಿವೆ. ಐಟಿ-ಐಟಿಇಎಸ್ ಕ್ಷೇತ್ರದಲ್ಲಿ 96 ಹಾಗೂ ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ಕ್ಷೇತ್ರದಲ್ಲಿ 211 ಮಂದಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ. ಔಷಧ, ಆರೋಗ್ಯ, ಆತಿಥ್ಯ ಮತ್ತು ಚಿಲ್ಲರೆ ಕ್ಷೇತ್ರಗಳಲ್ಲೂ ನೇಮಕಾತಿ ನಡೆದಿದೆ.

ಯುಎಇ ಹಾಗೂ ಸೌದಿ ಅರೇಬಿಯಾದಲ್ಲೂ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ವಿಶೇಷಚೇತನ ಅಭ್ಯರ್ಥಿಗಳಿಗೂ ಉದ್ಯೋಗ ದೊರೆತಿದ್ದು, ಮೇಳದ ಅಭ್ಯರ್ಥಿಗಳ ದತ್ತಾಂಶವನ್ನು ವರ್ಷಪೂರ್ತಿ ಬಳಸಿಕೊಂಡು ಅರ್ಹರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯ ಮುಂದುವರಿಸಲಾಗುವುದು ಎಂದು ವಿವೇಕ್ ಆಳ್ವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪ್ರಗತಿ ಉತ್ಪಾದನಾ ವಲಯದ ಮುಖ್ಯಸ್ಥರಾದ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗದ ಮುಖ್ಯಸ್ಥೆ ಕುಮಾರಿ ರಂಜಿತಾ ಆಚಾರ್ಯ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಪಿ.ಆರ್ ಒ. ದಿಶಾ ಶೆಟ್ಟಿ ಉಪಸ್ಥಿತರಿದ್ದರು.

