ಬೆಂಗಳೂರು: ಐದು ದಶಕಗಳಿಗೂ ಹೆಚ್ಚು ಕಾಲ ಬೆಂಗಳೂರಿನ ಸಿನಿಪ್ರೇಮಿಗಳನ್ನು ರಂಜಿಸಿದ್ದ ಲಾಲ್ಬಾಗ್ ಮುಖ್ಯರಸ್ತೆಯ ಐಕಾನಿಕ್ ಊರ್ವಶಿ ಚಿತ್ರಮಂದಿರ ಇದೀಗ ನೆಲಸಮವಾಗುತ್ತಿದೆ. 1970ರಲ್ಲಿ ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರಿಂದ ಉದ್ಘಾಟನೆಗೊಂಡಿದ್ದ ಈ ಚಿತ್ರಮಂದಿರ, ಹಲವು ತಲೆಮಾರುಗಳ ಸಿನಿ ನೆನಪುಗಳಿಗೆ ಸಾಕ್ಷಿಯಾಗಿತ್ತು.
ಸುಮಾರು 55 ವರ್ಷಗಳ ಅವಧಿಯಲ್ಲಿ 5,000ಕ್ಕೂ ಅಧಿಕ ಸಿನಿಮಾಗಳು ಇಲ್ಲಿ ಪ್ರದರ್ಶನಗೊಂಡಿದ್ದು, 2 ಏಕಪರದೆ ಚಿತ್ರಮಂದಿರಗಳ ಪೈಕಿ ವಿಶಿಷ್ಟ ಸ್ಥಾನ ಪಡೆದಿತ್ತು. ಅತ್ಯಾಧುನಿಕ ಧ್ವನಿ ವ್ಯವಸ್ಥೆ, ಉತ್ತಮ ಪ್ರದರ್ಶನ ಗುಣಮಟ್ಟ ಹಾಗೂ ದೊಡ್ಡ ಆಸನ ಸಾಮರ್ಥ್ಯದಿಂದಾಗಿ ಊರ್ವಶಿ ಚಿತ್ರಮಂದಿರ ಬೆಂಗಳೂರಿನ ಸಿನಿಪ್ರೇಮಿಗಳ ನೆಚ್ಚಿನ ತಾಣವಾಗಿತ್ತು.

ಈ ಥಿಯೇಟರ್ ಅನ್ನು ಬಸಟ್ಟಿ ಶೆಟ್ಟಿ ಅವರಿಗೆ ಗುತ್ತಿಗೆ ನೀಡಲಾಗಿದ್ದು, ಚಿತ್ರಮಂದಿರದ ಜಾಗದ ಗುತ್ತಿಗೆ ಅವಧಿ 2018ರ ಏಪ್ರಿಲ್ನಲ್ಲಿ ಮುಕ್ತಾಯಗೊಂಡ ಬಳಿಕ, ಭೂಮಾಲೀಕರು ಮತ್ತು ಚಿತ್ರಮಂದಿರದ ಆಡಳಿತ ಮಂಡಳಿ ನಡುವೆ ಕಾನೂನು ವಿವಾದ ಮುಂದುವರಿದಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಬಳಿಕ ಭೂಮಾಲೀಕರು ಪೊಲೀಸರ ಸಮ್ಮುಖದಲ್ಲಿ ಜಾಗವನ್ನು ವಶಕ್ಕೆ ಪಡೆದಿದ್ದು, ಕಟ್ಟಡ ತೆರವು ಕಾರ್ಯ ಆರಂಭವಾಗಿದೆ.
ಚಿತ್ರಮಂದಿರದ ಒಳಾಂಗಣದಲ್ಲಿದ್ದ 1100 ಆಸನಗಳು, ಪ್ರೊಜೆಕ್ಟರ್ಗಳು ಹಾಗೂ ಇತರೆ ಉಪಕರಣಗಳನ್ನು ತೆರವುಗೊಳಿಸಿದ ಬಳಿಕ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತಿದೆ. ಇದರೊಂದಿಗೆ ಬೆಂಗಳೂರಿನ ಸಿನಿಪ್ರೇಮಿಗಳ ಪಾಲಿನ ಮತ್ತೊಂದು ಐತಿಹಾಸಿಕ ಏಕಪರದೆ ಚಿತ್ರಮಂದಿರದ ಅಧ್ಯಾಯ ಮುಕ್ತಾಯಗೊಂಡಂತಾಗಿದೆ.
ಒಮ್ಮೆ ಸಿನಿಮಾ ನೋಡಲು ಜನರನ್ನು ಸೆಳೆಯುತ್ತಿದ್ದ ಊರ್ವಶಿ, ಇನ್ನು ಮುಂದೆ ಕಟ್ಟಡವಾಗಿ ಕಾಣಿಸದಿದ್ದರೂ, ಸಾವಿರಾರು ಸಿನಿಮಾಗಳು ಮತ್ತು ಅಸಂಖ್ಯಾತ ಪ್ರೇಕ್ಷಕರ ನೆನಪುಗಳಲ್ಲಿ ಶಾಶ್ವತವಾಗಿ ಉಳಿಯಲಿದೆ.

