ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ನಡುವೆ ಚಿತ್ರದ ಬಗ್ಗೆ ಸುಳ್ಳು, ದುರುದ್ದೇಶಪೂರಿತ ಹಾಗೂ ಮಾನಹಾನಿಕರ ಮಾಹಿತಿಯನ್ನು ಪ್ರಸಾರ ಮಾಡದಂತೆ ಚಿತ್ರತಂಡ ನ್ಯಾಯಾಲಯದ ಮೊರೆ ಹೋಗಿದ್ದು, ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡಿದೆ.
‘ಟಾಕ್ಸಿಕ್’ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 36ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೀವನ್ ರಾವ್ ಕುಲಕರ್ಣಿ ಅವರು ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.
ಆದೇಶದಂತೆ ಚಿತ್ರದ ಕುರಿತು ಅವಹೇಳನಕಾರಿ ಅಥವಾ ಮಾನಹಾನಿಕರ ಮಾಹಿತಿಯನ್ನು ಯೂಟ್ಯೂಬ್, ಸಾಮಾಜಿಕ ಜಾಲತಾಣಗಳು ಸೇರಿದಂತೆ ಯಾವುದೇ ಡಿಜಿಟಲ್ ವೇದಿಕೆಯಲ್ಲಿ ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹಂಚಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ದೊಡ್ಡ ಸಿನಿಮಾಗಳ ಬಿಡುಗಡೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹಾಗೂ ದುರುದ್ದೇಶಪೂರಿತ ಪೋಸ್ಟ್ಗಳು ಹರಿದಾಡುವ ಹಿನ್ನೆಲೆಯಲ್ಲಿ ಚಿತ್ರತಂಡ ಮುನ್ನೆಚ್ಚರಿಕೆಯಾಗಿ ಕಾನೂನು ಕ್ರಮ ಕೈಗೊಂಡಿದೆ.
ಆದರೆ ನ್ಯಾಯಾಲಯದ ಈ ಆದೇಶವು ಸಿನಿಮಾದ ನೈಜ ವಿಮರ್ಶೆ ಅಥವಾ ಪ್ರೇಕ್ಷಕರ ಪ್ರಾಮಾಣಿಕ ಅಭಿಪ್ರಾಯಗಳಿಗೆ ನಿರ್ಬಂಧ ವಿಧಿಸುವುದಿಲ್ಲ. ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹರಡುವುದು ಹಾಗೂ ಮಾನಹಾನಿ ಮಾಡುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಗೀತೂ ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ಯಶ್ ಕೂಡ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ನಯನತಾರಾ, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಸೇರಿದಂತೆ ಪ್ರಮುಖ ತಾರಾಗಣವಿದೆ.
ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು, ಬಿಡುಗಡೆಗೂ ಮುನ್ನವೇ ನ್ಯಾಯಾಲಯದ ತಡೆಯಾಜ್ಞೆ ಪಡೆದಿರುವುದು ಚಿತ್ರತಂಡಕ್ಕೆ ಕಾನೂನು ರಕ್ಷಣೆ ನೀಡಿದಂತಾಗಿದೆ.

