ವಾಷಿಂಗ್ಟನ್ : ಇರಾನ್ನ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ವಲಯದ ಮೇಲೆ ಒತ್ತಡ ಹೆಚ್ಚಿಸುವ ನಿಟ್ಟಿನಲ್ಲಿ ಅಮೆರಿಕ ಮಹತ್ವದ ಕ್ರಮ ಕೈಗೊಂಡಿದೆ. ಇರಾನ್ಗೆ ಸಂಬಂಧಿಸಿದ ಅಕ್ರಮ ವ್ಯಾಪಾರ ಹಾಗೂ ಇಂಧನ ಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ನಾಲ್ಕು ಭಾರತೀಯ ಸಂಸ್ಥೆಗಳು ಮತ್ತು ಮೂವರು ಭಾರತೀಯ ಪ್ರಜೆಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.
“ಆಪರೇಷನ್ ಎಕನಾಮಿಕ್ ಔಟ್ಕಾಸ್ಟ್” ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇರಾನ್ನ ಉತ್ಪನ್ನಗಳ ಖರೀದಿ, ಮಾರಾಟ ಮತ್ತು ಸಾಗಣೆಗೆ ನೆರವು ನೀಡಿದ ಆರೋಪದ ಮೇಲೆ ಭಾರತೀಯ ಮೂಲದ ನಾಲ್ಕು ಸಂಸ್ಥೆಗಳನ್ನು ನಿರ್ಬಂಧಿತ ಪಟ್ಟಿಗೆ ಸೇರಿಸಲಾಗಿದೆ.
ಅಮೆರಿಕದ ಹಣಕಾಸು ಇಲಾಖೆ, ಈ ಅಕ್ರಮ ವ್ಯಾಪಾರ ಜಾಲಗಳಿಗೆ ನೆರವು ನೀಡಿದ ಆರೋಪದ ಮೇರೆಗೆ ಸಂಬಂಧಿಸಿದ ಮೂವರು ಭಾರತೀಯರನ್ನು ಕೂಡ ನಿರ್ಬಂಧಗಳ ವ್ಯಾಪ್ತಿಗೆ ಒಳಪಡಿಸಿದೆ.
ನಿರ್ಬಂಧಕ್ಕೊಳಗಾದ ಭಾರತೀಯ ಸಂಸ್ಥೆಗಳು:
- ಪೋರ್ಟ್ಈಸ್ ಪಾರ್ಟ್ನರ್ಸ್ ಎಲ್ಎಲ್ಪಿ
- ಸದಾಶಿವ ಓವರ್ಸೀಸ್ ಲಿಮಿಟೆಡ್
- ಸಾಫ್ಟ್ಟೆಕ್ ಪ್ರೈವೇಟ್ ಲಿಮಿಟೆಡ್
- ಪ್ರಕೃತೀಸ್ ಇನ್ಫ್ರಾ ಇಂಪೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
ನಿರ್ಬಂಧಕ್ಕೊಳಗಾದ ಭಾರತೀಯ ಪ್ರಜೆಗಳು:
ಇಂದ್ರಿಸ್ಮಿಯಾ ಅಷ್ರಫ್ಮಿಯಾ ಶೇಖ್
ಹರೀಶ್ ರಾಮಚಂದ್ರ ರಂಗಿ — ಪೋರ್ಟ್ಈಸ್ ಪಾರ್ಟ್ನರ್ಸ್
ಪ್ರಶಾಂತ್ ಗರ್ಗ್ — ಪಿಪಿ ಸಾಫ್ಟ್ಟೆಕ್
ಇರಾನ್ನ ತೈಲ ಮತ್ತು ಪೆಟ್ರೋಕೆಮಿಕಲ್ ಆದಾಯದ ಮೂಲಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಮೆರಿಕ ಇತ್ತೀಚಿನ ಅವಧಿಯಲ್ಲಿ ಇಂತಹ ನಿರ್ಬಂಧ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ.
ನಿರ್ಬಂಧದ ಪರಿಣಾಮ: ಅಮೆರಿಕದಲ್ಲಿರುವ ಇವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಹಾಗೂ ಯಾವುದೇ ಅಮೆರಿಕನ್ ಪ್ರಜೆ ಅಥವಾ ಸಂಸ್ಥೆ ಇವರೊಂದಿಗೆ ವ್ಯವಹರಿಸುವುದನ್ನು ನಿಷೇಧಿಸಲಾಗಿದೆ.
ಅಮೆರಿಕವು ಕೇವಲ ಭಾರತೀಯ ಕಂಪನಿಗಳು ಮತ್ತು ಪ್ರಜೆಗಳನ್ನು ಗುರಿಯಾಗಿಸಿಲ್ಲ. ಇರಾನ್ನ ಮಿಲಿಟರಿ ಚಟುವಟಿಕೆ, ಸರಬರಾಜು, ವ್ಯಾಪಾರಗಳಲ್ಲಿ ಶಾಮೀಲಾಗಿರುವ ಶಂಕೆ ಮತ್ತು ಆರೋಪದ ಮೇಲೆ ಜಾಗತಿಕವಾಗಿ ಸುಮಾರು 60 ಸಂಸ್ಥೆಗಳು, ವ್ಯಕ್ತಿಗಳು ಹಾಗೂ ಹಡಗುಗಳ ಮೇಲೆ ಅಮೆರಿಕ ನಿಷೇಧ ಹಾಕಿದೆ.

