ಮಂಗಳೂರು: ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯು ಮಂಗಳೂರಿನ ಪ್ರಥಮ 100 ಹಾಸಿಗೆಗಳ ಬಹುವಿಶೇಷತೆ ಹೊಂದಿರುವ ಆಯುರ್ವೇದ ಆಸ್ಪತ್ರೆಯಾಗಿದ್ದು, ಮೇ 15, 2026ರಿಂದ NABH ಮಾನ್ಯತೆ ಪಡೆದಿದೆ ಎಂದು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಸಂದೀಪ್ ಬೇಕಲ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ಶುದ್ಧ ಆಯುರ್ವೇದ ಚಿಕಿತ್ಸೆಯನ್ನು ಒದಗಿಸುತ್ತಿರುವ ಆಸ್ಪತ್ರೆಗೆ NABH ಮಾನ್ಯತೆ ದೊರೆತಿರುವುದು ಮಹತ್ವದ ಸಾಧನೆ ಎಂದರು.

NABH ಮಾನದಂಡಗಳಿಗೆ ಅನುಗುಣವಾಗಿ ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಆರೈಕೆ, ಪ್ರಮಾಣೀಕೃತ ವೈದ್ಯಕೀಯ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳು, ಸೋಂಕು ತಡೆ ಮತ್ತು ನಿಯಂತ್ರಣ, ಸುರಕ್ಷಿತ ಔಷಧಿ ನಿರ್ವಹಣೆ ಹಾಗೂ ರೋಗಿಗಳ ಹಕ್ಕುಗಳಿಗೆ ಗೌರವ ನೀಡುವ ವ್ಯವಸ್ಥೆಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಇದರೊಂದಿಗೆ ವಿಮಾ ಕಂಪನಿಗಳ ಮೂಲಕ ಮರುಪಾವತಿ ಹಾಗೂ ಕ್ಯಾಶ್ಲೆಸ್ ಚಿಕಿತ್ಸಾ ಸೌಲಭ್ಯ ಕೂಡ ಲಭ್ಯವಿದೆ. ಸುರಕ್ಷಿತ ಮೂಲಸೌಕರ್ಯ ಮತ್ತು ಗುಣಮಟ್ಟದ ಚಿಕಿತ್ಸೆಗೆ ಆಸ್ಪತ್ರೆ ಆದ್ಯತೆ ನೀಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ಟ್ರಸ್ಟಿ ಸಮೀರ್ ಪುರಾಣಿಕ್, ಪ್ರಮುಖರಾದ ಡಾ.ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

