ಬೆಂಗಳೂರು: ಗೀತು ಮೋಹನ್ದಾಸ್ ನಿರ್ದೇಶನದ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗೋನ್-ಅಪ್ಸ್’ ಚಿತ್ರಕ್ಕೂ ಪೈರಸಿ ಕಾಟ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚಿತ್ರ ಬಿಡುಗಡೆಯಾಗಿ ಎರಡು ದಿನಗಳು ಕಳೆದಿರುವಷ್ಟರಲ್ಲೇ ಸಿನಿಮಾದ ಹಲವು ದೃಶ್ಯಗಳ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎನ್ನಲಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಮೊಬೈಲ್ಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಚಿತ್ರ ಬಿಡುಗಡೆಗೂ ಮುನ್ನವೇ ನಿರ್ಮಾಪಕರು ಪ್ರೇಕ್ಷಕರಿಗೆ ಸಿನಿಮಾದ ಯಾವುದೇ ದೃಶ್ಯಗಳನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡದಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದರು. ಅಲ್ಲದೆ, ಚಿತ್ರದ ಕಥೆಯ ಪ್ರಮುಖ ಅಂಶಗಳು ಮತ್ತು ಸ್ಪಾಯ್ಲರ್ಗಳನ್ನು ಬಹಿರಂಗಪಡಿಸದಂತೆಯೂ ಮನವಿ ಮಾಡಲಾಗಿತ್ತು.

ಆದರೂ ಕೆಲವರು ಈ ಮನವಿಯನ್ನು ಲೆಕ್ಕಿಸದೆ ಚಿತ್ರಮಂದಿರದೊಳಗೆ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈರಲ್ ಆಗಿರುವ ಎನ್ನಲಾದ ವಿಡಿಯೋ ತುಣುಕುಗಳಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಅಭಿನಯದ ಪ್ರಮುಖ ಸನ್ನಿವೇಶಗಳು ಇರುವುದಾಗಿ ವರದಿಯಾಗಿದೆ.
ಈ ಬೆಳವಣಿಗೆ ಯಶ್ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸಿನಿಮಾದ ದೃಶ್ಯಗಳನ್ನು ಚಿತ್ರೀಕರಿಸಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಹಲವು ವರ್ಷಗಳ ಪರಿಶ್ರಮ ಹಾಗೂ ಭಾರೀ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಗಿರುವ ಚಿತ್ರಕ್ಕೆ ಪೈರಸಿಯಿಂದ ಯಾವುದೇ ರೀತಿಯ ಹಾನಿಯಾಗದಂತೆ ಚಿತ್ರತಂಡ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಪೈರಸಿ ಆರೋಪದ ಹಿನ್ನೆಲೆಯಲ್ಲಿ ನಿರ್ಮಾಪಕರು ಹಾಗೂ ಚಿತ್ರತಂಡ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

