ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ನ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆಯಾಗಿದ್ದಾರೆ. ವೈಯಕ್ತಿಕ ಪ್ರವಾಸದ ಹಿನ್ನೆಲೆಯಲ್ಲಿ ನೇಪಾಳಕ್ಕೆ ತೆರಳಿದ್ದ ಅವರು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ದೃಢಪಡಿಸಿದೆ.
ಲಕ್ಷ್ ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಕಂಪನಿ ಕಳವಳ ವ್ಯಕ್ತಪಡಿಸಿದೆ. ಸಂಬಂಧಿತ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು ಅವರ ಕುರಿತು ಮಾಹಿತಿ ಕಲೆ ಹಾಕಿ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ. ಕುಟುಂಬದವರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುತ್ತಿದೆ ಎಂದು ಇನ್ಫೋಸಿಸ್ ತಿಳಿಸಿದೆ.
ಇದೇ ವೇಳೆ ಪ್ರವಾಹದಿಂದ ಉಂಟಾಗಿರುವ ರಕ್ಷಣಾ ಕಾರ್ಯಾಚರಣೆಗಳಿಗೆ ನೇಪಾಳ ಸರ್ಕಾರವು ಭಾರತ ಸೇರಿದಂತೆ ವಿದೇಶಿ ನೆರವು ಕೋರಿದ್ದು, ಜಲವಿದ್ಯುತ್ ಸುರಂಗದಲ್ಲಿ ಸಿಲುಕಿರುವ ಸುಮಾರು 1,000 ಕಾರ್ಮಿಕರ ರಕ್ಷಣೆಗೆ ಭಾರತದ ವಿಶೇಷ ತಂಡ ನೆರವಾಗಲಿದೆ.

