ನವದೆಹಲಿ: ಆಹಾರ ಗುಣಮಟ್ಟದ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಎವರೆಸ್ಟ್ ಮತ್ತು ಎಲ್ಜಿ ಬ್ರಾಂಡ್ಗಳ ಇಂಗು ಪುಡಿ ಉತ್ಪನ್ನಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕ್ರಮ ಕೈಗೊಂಡಿದೆ.
ಗ್ರಾಹಕರಿಂದ ಬಂದ ದೂರಿನ ಆಧಾರದ ಮೇಲೆ FSSAI ಅಧಿಕಾರಿಗಳು ಎರಡೂ ಕಂಪನಿಗಳ ಉತ್ಪಾದನಾ ಘಟಕಗಳಿಂದ ಇಂಗು ಪುಡಿಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದರು. ಪರೀಕ್ಷೆಯ ವೇಳೆ ಉತ್ಪನ್ನಗಳ ಗುಣಮಟ್ಟದಲ್ಲಿ ನಿಗದಿತ ಮಾನದಂಡಗಳಿಗೆ ಹೊಂದಿಕೆಯಾಗದ ಅಂಶಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎವರೆಸ್ಟ್ನ ಕೇಂದ್ರೀಯ ಪರವಾನಗಿ ಪಡೆದ ಘಟಕ ಹಾಗೂ ಮುಂಬೈನಲ್ಲಿರುವ ಎಲ್ಜಿ ಬ್ರಾಂಡ್ನ ಘಟಕದಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಆಲ್ಕೋಹಾಲ್ನಲ್ಲಿ ಕರಗುವ ಅಂಶದ ಪ್ರಮಾಣ ನಿಗದಿತ ಮಟ್ಟಕ್ಕಿಂತ ಕಡಿಮೆ ಇರುವುದು ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಕೆಲವು ಮಾದರಿಗಳಲ್ಲಿ ಈ ಪ್ರಮಾಣ ಶೂನ್ಯದಿಂದ ಶೇ.3ರಷ್ಟಿದ್ದರೆ, ಆಹಾರ ಸುರಕ್ಷತಾ ನಿಯಮಗಳ ಪ್ರಕಾರ ಹೆಚ್ಚಿನ ಪ್ರಮಾಣ ಇರಬೇಕಾಗಿದೆ ಎಂದು ತಿಳಿಸಲಾಗಿದೆ.
ಇದೇ ವೇಳೆ, ಎಲ್ಜಿ ಬ್ರಾಂಡ್ ಘಟಕದಿಂದ ಸಂಗ್ರಹಿಸಲಾದ ಕಚ್ಚಾ ವಸ್ತುಗಳ ಮಾದರಿಗಳಲ್ಲಿಯೂ ನಿಗದಿತ ಮಾನದಂಡಗಳಿಗೆ ವಿರುದ್ಧವಾದ ಅಂಶಗಳು ಕಂಡುಬಂದಿವೆ ಎಂದು FSSAI ಹೇಳಿದೆ. ಕೆಲವು ಮಾದರಿಗಳಲ್ಲಿ ಪಿಷ್ಟದ ಪ್ರಮಾಣ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನದಾಗಿ ದಾಖಲಾಗಿದೆ.
ಪ್ರಯೋಗಾಲಯ ಪರೀಕ್ಷೆಗಳಲ್ಲಿ ಉತ್ಪನ್ನಗಳ ಗುಣಮಟ್ಟಕ್ಕೆ ಸಂಬಂಧಿಸಿದ ಲೋಪಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಮಾರುಕಟ್ಟೆಯಲ್ಲಿರುವ ಸಂಬಂಧಿತ ಕಳಪೆ ಗುಣಮಟ್ಟದ ಉತ್ಪನ್ನಗಳ ಮಾರಾಟವನ್ನು ತಡೆಯುವಂತೆ ಎರಡೂ ಕಂಪನಿಗಳಿಗೆ FSSAI ನಿರ್ದೇಶನ ನೀಡಿದೆ.
ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಉತ್ಪನ್ನಗಳ ಗುಣಮಟ್ಟ ಹಾಗೂ ಸುರಕ್ಷತಾ ಮಾನದಂಡಗಳ ಪಾಲನೆಯ ಕುರಿತು ಮುಂದಿನ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

