ನವದೆಹಲಿ: ಹೆತ್ತವರ ಸಂತೋಷಕ್ಕಾಗಿ ಮಕ್ಕಳು ಮಾಡುವ ಸಣ್ಣ ಪ್ರಯತ್ನಗಳೇ ಕೆಲವೊಮ್ಮೆ ದೊಡ್ಡ ಖುಷಿಗೆ ಕಾರಣವಾಗುತ್ತವೆ. ಇದೀಗ ಮಗಳೊಬ್ಬಳು ತನ್ನ ಸ್ವಂತ ದುಡಿಮೆಯ ಹಣದಿಂದ ತಾಯಿಯನ್ನು ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಕರೆದೊಯ್ದು ಸಿನಿಮಾ ತೋರಿಸಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅನಾಮಿಕಾ ಬಜ್ಪೈ (Anamika Bajpai) ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಸ್ವಂತ ಕಾಲ ಮೇಲೆ ನಿಂತು ದುಡಿಯುತ್ತಿರುವ ಮಗಳು ತನ್ನ ತಾಯಿಯ ಸಣ್ಣ ಆಸೆಯನ್ನು ಈಡೇರಿಸಿರುವ ದೃಶ್ಯಗಳು ಗಮನ ಸೆಳೆದಿವೆ. ಮಗಳೊಂದಿಗೆ ಮೊದಲ ಬಾರಿಗೆ ಥಿಯೇಟರ್ಗೆ ತೆರಳಿದ ತಾಯಿಯ ಮುಖದಲ್ಲಿನ ಸಂತಸವೂ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.

ಸಿನಿಮಾ ವೀಕ್ಷಿಸಿದ ಬಳಿಕ ತಾಯಿ-ಮಗಳು ಇಬ್ಬರೂ ಶಾಪಿಂಗ್ಗೆ ತೆರಳಿ, ಮನೆಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಬಳಿಕ ಫುಡ್ಕೋರ್ಟ್ನಲ್ಲಿ ಒಟ್ಟಿಗೆ ಊಟ ಸವಿದು ಕೆಲಕಾಲ ಸಂತೋಷದಿಂದ ಕಳೆದಿದ್ದಾರೆ. ಮಗಳೊಂದಿಗೆ ತಾಯಿ ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಕಳೆಯುತ್ತಿರುವ ದೃಶ್ಯಗಳು ನೆಟ್ಟಿಗರ ಮನ ಗೆದ್ದಿವೆ.

ಈ ವಿಡಿಯೋ ಈಗಾಗಲೇ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಇದು ಆಕೆಯ ಬಹುದಿನಗಳ ಕನಸಾಗಿರಬೇಕು’, ‘ಇಂತಹ ಮುಗ್ಧ ತಾಯಂದಿರನ್ನು ನೋಡುವ ಕೊನೆಯ ಪೀಳಿಗೆ ನಮ್ಮದಾಗಿರಬಹುದು’ ಎಂಬಂತಹ ಭಾವನಾತ್ಮಕ ಪ್ರತಿಕ್ರಿಯೆಗಳು ಕಾಮೆಂಟ್ಗಳಲ್ಲಿ ವ್ಯಕ್ತವಾಗಿವೆ.

‘ನಿಮ್ಮ ಬಗ್ಗೆ ಹೆಮ್ಮೆ ಇದೆ’, ‘ಅದೃಷ್ಟವಂತೆ ತಾಯಿ’ ಎಂದು ಹಲವರು ಮಗಳನ್ನು ಕೊಂಡಾಡಿದ್ದಾರೆ. ದುಡಿಮೆಯ ಮೊದಲ ಆದಾಯವನ್ನು ತಾಯಿಯ ಸಂತೋಷಕ್ಕಾಗಿ ಬಳಸಿದ ಮಗಳ ಈ ನಡೆ, ಹೆತ್ತವರನ್ನು ಪ್ರೀತಿಸುವುದಕ್ಕೆ ದೊಡ್ಡ ಆಸ್ತಿಯ ಅಗತ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ

