ಮಂಗಳೂರು: ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ಹಿರಿಯ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ಪೇಟೆ ಅವರಿಗೆ ಪ್ರತಿಷ್ಠಿತ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಬೆಂಗಳೂರಿನ ಬನಶಂಕರಿಯ ಜೆ.ಎಸ್.ಎಸ್.ಪಬ್ಲಿಕ್ ಶಾಲೆಯ ಫಣಲಿಂಗ ಶಿವಯೋಗಿ ಸಭಾಂಗಣದಲ್ಲಿ ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ.), ಬೆಂಗಳೂರು ಇದರ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಆರ್.ಎನ್.ಎಸ್.ಕಾಲೇಜಿನ ಪ್ರಾಂಶುಪಾಲ ಪ್ರೊ. ರವಿಶಂಕರ್ ಬಿ.ವಿ. ಅವರು ಎಸ್.ಜಗದೀಶ್ಚಂದ್ರ ಅಂಚನ್ ಅವರಿಗೆ ಬೆಳ್ಳಿ ಹಾಗೂ ಚಿನ್ನದ ಪದಕದೊಂದಿಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಕ್ರೀಡಾ ಕ್ಷೇತ್ರದ ಬೆಳವಣಿಗೆ, ಕ್ರೀಡಾಪಟುಗಳ ಸಾಧನೆ ಹಾಗೂ ಕ್ರೀಡಾ ಲೋಕದ ವಿವಿಧ ವಿಚಾರಗಳನ್ನು ತಮ್ಮ ಅಂಕಣ ಬರಹಗಳ ಮೂಲಕ ನಿರಂತರವಾಗಿ ದಾಖಲಿಸುತ್ತಿರುವ ಅಂಚನ್ ಅವರ ಸೇವೆಯನ್ನು ಗಣ್ಯರು ಶ್ಲಾಘಿಸಿದರು.
ಸಮಾರಂಭದಲ್ಲಿ ಬೆಂಗಳೂರು ಆರ್.ಎನ್.ಎಸ್. ಕಾಲೇಜು ಹಾಗೂ ಮುಡಿಪುವಿನ ಜ್ಞಾನಶ್ರೀ ವಿದ್ಯಾಲಯದ ವತಿಯಿಂದಲೂ ಅಂಚನ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ಬಸವ ವೇದಿಕೆ (ರಿ.), ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ವಚನ ಜ್ಯೋತಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ದಾನಪ್ರಕಾಶ ಎನ್. ತಿಮ್ಮಪ್ಪ, ಎಂ.ಎನ್.ಆರ್. ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹನ್ ಕುಮಾರ್ ಆರ್., ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ, ಜ್ಞಾನ ಮಂದಾರ ಟ್ರಸ್ಟ್ನ ಸಂಸ್ಥಾಪಕ ಸೋಮಶೇಖರ್, ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಹಾಗೂ ಚಲನಚಿತ್ರ ನಟಿ ಎಂ.ಎಸ್. ಆರತಿ ಸುರೇಶ್, ಪ್ರೊ. ಕಾಂತಪ್ಪ, ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಹಾಗೂ ರಂಗ ಸಮಾಜ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ತಿಲಕ್ ರಾಜ್ ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಗದೀಶ್ಚಂದ್ರ ಅಂಚನ್ ಪಡೆದ ಪ್ರಶಸ್ತಿ

ಕ್ರೀಡಾ ಬರವಣಿಗೆ ಕ್ಷೇತ್ರದ ಸೇವೆಗಾಗಿ ಎಸ್. ಜಗದೀಶ್ಚಂದ್ರ ಅಂಚನ್ ಅವರು ಈ ಹಿಂದೆ ಹಲವು ಪ್ರತಿಷ್ಠಿತ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದಿದ್ದಾರೆ. 2013ರಲ್ಲಿ ಮೀಡಿಯಾ ಅವಾರ್ಡ್, 2014ರಲ್ಲಿ ಸಮಾಜ ರತ್ನ ರಾಜ್ಯ ಪ್ರಶಸ್ತಿ, 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, 2019ರಲ್ಲಿ ಜಾನಪದ ಲೋಕ ರಾಜ್ಯ ಪ್ರಶಸ್ತಿ ಮತ್ತು ನಮ್ಮ ಕುಡ್ಲ ಸಾಧಕ ಪ್ರಶಸ್ತಿ ಪಡೆದಿದ್ದಾರೆ.
2020ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಕೆ.ಎ. ನೆಟ್ಟಕಲ್ಲಪ್ಪ ರಾಜ್ಯ ಪ್ರಶಸ್ತಿ, 2021ರಲ್ಲಿ ಸಿದ್ಧಗಂಗಾಶ್ರೀ ರಾಜ್ಯ ಪ್ರಶಸ್ತಿ, 2022ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕದ ಕೆ.ಆರ್. ಟ್ಯಾಗೋರ್ ದತ್ತಿ ನಿಧಿ ಪ್ರಶಸ್ತಿ, 2023ರಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ ಹಾಗೂ ಸಾಧನ ಪ್ರಶಸ್ತಿ, 2024ರಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ, 2026ರಲ್ಲಿ ಜಾನಪದ ರತ್ನ ಪ್ರಶಸ್ತಿ ಮತ್ತು ಕನ್ನಡ ಪಯಸ್ವಿನಿ ಅವಾರ್ಡ್ ಸೇರಿದಂತೆ ಹಲವು ಗೌರವಗಳನ್ನು ಅವರು ಸ್ವೀಕರಿಸಿದ್ದಾರೆ.

