ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಭಾಗದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ ಪ್ರಕರಣವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಭೇದಿಸಿದ್ದು, ಕೇರಳ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 24ರ ರಾತ್ರಿ ದೇವಸ್ಥಾನದ ಹೊರಗಿದ್ದ ಕಾಣಿಕೆ ಡಬ್ಬಿಯನ್ನು ಅಪರಿಚಿತ ವ್ಯಕ್ತಿಯೊಬ್ಬರು ಕಳವು ಮಾಡಿಕೊಂಡು ಹೋಗಿದ್ದರು. ಆಗಸ್ಟ್ 25ರಂದು ದೇವಸ್ಥಾನದ ಆಡಳಿತ ಪದಾಧಿಕಾರಿ ವಿನೋದ್ ಕುಮಾರ್ ಬಿ. ಅವರು ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಕಾಣಿಕೆ ಡಬ್ಬಿಯಲ್ಲಿ ಸುಮಾರು ₹4,500 ನಗದು ಇದ್ದಿರುವ ಸಾಧ್ಯತೆ ಇದ್ದು, ಡಬ್ಬಿಯ ಮೌಲ್ಯ ಸುಮಾರು ₹2,500 ಎಂದು ದೂರಿನಲ್ಲಿ ತಿಳಿಸಲಾಗಿತ್ತು. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತನಿಖೆ ನಡೆಸಿದ್ದರು.
ತನಿಖೆಯ ವೇಳೆ ಕೇರಳದ ಕಿನ್ನಿಂಗಾರು, ಬದಿಯಡ್ಕ ಹಾಗೂ ಆದೂರು ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳ ಕಾಸರಗೋಡಿನ ಸತೀಶ್ (31) ಎಂಬಾತನನ್ನು ಬದಿಯಡ್ಕದಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ ಕಳವು ಮಾಡಲಾಗಿದ್ದ ಕಾಣಿಕೆ ಡಬ್ಬಿ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ₹1 ಲಕ್ಷ ಮೌಲ್ಯದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ವಿರುದ್ಧ ಈಗಾಗಲೇ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣವೂ ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ನಿರ್ದೇಶನದಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐಗಳಾದ ಗುಣಪಾಲ ಜೆ. ಹಾಗೂ ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸಿಡಿಆರ್ ವಿಭಾಗದ ಸಂಪತ್ ಹಾಗೂ ದಿವಾಕರ್ ಅವರು ತನಿಖೆಗೆ ಸಹಕರಿಸಿದ್ದಾರೆ.

