ಮಂಗಳೂರು: ಆಟೋ ರಿಕ್ಷಾ ಚಾಲಕರಿಗೆ ನ್ಯಾಯಯುತ ಪ್ರಯಾಣ ದರ ನಿಗದಿಪಡಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ (SDTU) ಮಂಗಳೂರು ನಗರ ಜಿಲ್ಲಾ ಸಮಿತಿ ಈ ಹಿಂದೆಯೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಇದೀಗ ಜಿಲ್ಲಾಡಳಿತ ಹೊರಡಿಸಿರುವ ಪರಿಷ್ಕೃತ ದರದ ಕುರಿತು ಆಟೋ ಚಾಲಕರ ಸಂಘಟನೆಗಳಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ದರವನ್ನು ಮರುಪರಿಶೀಲಿಸುವಂತೆ SDTU ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ
ಇಂಧನ ಬೆಲೆ ಏರಿಕೆ, ವಾಹನಗಳ ನಿರ್ವಹಣಾ ವೆಚ್ಚ, ವಿಮೆ, ಬಿಡಿಭಾಗಗಳು, ಟೈರ್ ಹಾಗೂ ಇತರ ಖರ್ಚುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾದ ಪ್ರಯಾಣ ದರ ನಿಗದಿಪಡಿಸಬೇಕೆಂದು SDTU ತನ್ನ ಮನವಿಯಲ್ಲಿ ಒತ್ತಾಯಿಸಿತ್ತು. ಕನಿಷ್ಠ ಪ್ರಯಾಣ ದರ ₹50 ಹಾಗೂ ಪ್ರತಿ ಕಿಲೋಮೀಟರ್ ರನ್ನಿಂಗ್ ದರ ₹30 ನಿಗದಿಪಡಿಸುವಂತೆ ಮನವಿ ಸಲ್ಲಿಸಲಾಗಿತ್ತು.
ಈ ಕುರಿತು ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆಯ ಜಂಟಿ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಆಟೋ ಚಾಲಕರ ಯೂನಿಯನ್ಗಳ ಪ್ರತಿನಿಧಿಗಳ ಸಭೆಯೂ ನಡೆದಿತ್ತು. ಸಭೆಯಲ್ಲಿ SDTU ಸೇರಿದಂತೆ ವಿವಿಧ ಯೂನಿಯನ್ಗಳು ತಮ್ಮ ಬೇಡಿಕೆಗಳನ್ನು ಮಂಡಿಸಿದ್ದು, SDTU ವತಿಯಿಂದ ಕನಿಷ್ಠ ₹50 ಹಾಗೂ ರನ್ನಿಂಗ್ ದರ ₹30 ನಿಗದಿಪಡಿಸುವ ಬೇಡಿಕೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಲಾಗಿತ್ತು.
ಆದರೆ ಇದೀಗ ಜಿಲ್ಲಾಡಳಿತವು ಕನಿಷ್ಠ ಪ್ರಯಾಣ ದರವನ್ನು ₹40 ಹಾಗೂ ಪ್ರತಿ ಕಿಲೋಮೀಟರ್ ರನ್ನಿಂಗ್ ದರವನ್ನು ₹20ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಸಭೆಯಲ್ಲಿ ಯೂನಿಯನ್ಗಳು ಮಂಡಿಸಿದ್ದ ಬೇಡಿಕೆಗಳಿಗೆ ಹೋಲಿಸಿದರೆ ನಿಗದಿಯಾಗಿರುವ ದರದಲ್ಲಿ ನಿರೀಕ್ಷಿತ ಮಟ್ಟದ ಪರಿಷ್ಕರಣೆ ಆಗಿಲ್ಲ ಎಂಬ ಅಸಮಾಧಾನವನ್ನು ಆಟೋ ಚಾಲಕರ ಸಂಘಟನೆಗಳು ವ್ಯಕ್ತಪಡಿಸಿವೆ.
ಪ್ರಸ್ತುತ ಇಂಧನ ದರ ಹಾಗೂ ಆಟೋ ರಿಕ್ಷಾಗಳ ನಿರ್ವಹಣಾ ವೆಚ್ಚವನ್ನು ಪರಿಗಣಿಸಿದಾಗ ₹20 ರನ್ನಿಂಗ್ ದರದಲ್ಲಿ ಚಾಲಕರಿಗೆ ಸೂಕ್ತ ಆದಾಯ ಗಳಿಸುವುದು ಕಷ್ಟಕರವಾಗಲಿದೆ. ದಿನವಿಡೀ ದುಡಿಯುವ ಆಟೋ ಚಾಲಕರ ಕುಟುಂಬ ನಿರ್ವಹಣೆ ಹಾಗೂ ಜೀವನೋಪಾಯದ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು SDTU ತಿಳಿಸಿದೆ.
ಆದ್ದರಿಂದ ಜಿಲ್ಲಾಡಳಿತವು ನೂತನ ದರವನ್ನು ಮರುಪರಿಶೀಲಿಸಿ, ಆಟೋ ಚಾಲಕರ ಸಂಘಟನೆಗಳೊಂದಿಗೆ ಮತ್ತೊಮ್ಮೆ ಸಮಾಲೋಚನೆ ನಡೆಸಬೇಕು. ಕನಿಷ್ಠ ದರ ₹50 ಹಾಗೂ ರನ್ನಿಂಗ್ ದರ ₹30 ನಿಗದಿಪಡಿಸುವ ಮೂಲಕ ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು SDTU ಮಂಗಳೂರು ನಗರ ಜಿಲ್ಲಾ ಸಮಿತಿ ಆಗ್ರಹಿಸಿದೆ.

